ಮಡಿಕೇರಿ, ಫೆ. 1: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಾ ಪ್ರಕ್ರಿಯೆ ಮುಕ್ತಾಯದ ನಂತರ ವೀರಾಜಪೇಟೆ ತಾಲೂಕಿನಲ್ಲಿ ಪ್ರಪ್ರಥಮ ಕೊಡಗು ಜಿಲ್ಲಾ ಮಟ್ಟದ ಬಲಿಜ ಕ್ರೀಡಾಕೂಟ ನಡೆಸಲು ಸೋಮವಾರಪೇಟೆ ತಾಲೂಕು ಬಲಿಜ ಸಮಾಜ ನೇತೃತ್ವದಲ್ಲಿ ಇತ್ತೀಚೆಗೆ ಜರುಗಿದ ಜಿಲ್ಲಾ ಬಲಿಜ ಸಮಾಜ ಹಾಗೂ ಮೂರು ತಾಲೂಕು ಬಲಿಜ ಸಮಾಜ ಪದಾಧಿಕಾರಿಗಳ ಸಭೆಯಲ್ಲಿ ಒಮ್ಮತ ವ್ಯಕ್ತವಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್, ಕೊಡಗಿನ ಸಮಸ್ತ ಬಲಿಜ ಬಾಂಧವರನ್ನು ಒಗ್ಗೂಡಿಸಲು ಹಾಗೂ ಬಲಿಜ ಜನಾಂಗಕ್ಕೆ 2ಎ ಮೀಸಲಾತಿಗೆ ಹೋರಾಟ ನಡೆಸಲು ಜಿಲ್ಲೆಯಾದ್ಯಂತ ಬಲಿಜ ಗಣತಿ ಕಾರ್ಯಕ್ರಮವನ್ನು ಸಮರೋಪಾದಿಯಲ್ಲಿ ಮುಗಿಸ ಬೇಕಾಗಿದೆ. ಈಗಾಗಲೇ ವೀರಾಜಪೇಟೆ ಹಾಗೂ ಮಡಿಕೇರಿ ತಾಲೂಕು ಬಲಿಜ ಗಣತಿ ಕಾರ್ಯಕ್ರಮ ಆರಂಭ ಗೊಂಡಿದ್ದು, ಮುಂದೆ ಸೋಮವಾರ ಪೇಟೆ ತಾಲೂಕು ಬಲಿಜ ಗಣತಿ ಕಾರ್ಯಕ್ರಮಕ್ಕೆ ಶಿರಂಗಾಲದಿಂದ ಚಾಲನೆ ನೀಡಲಾಗುವದು.

ತಾಲೂಕು ಅಧ್ಯಕ್ಷ ಟಿ.ಡಿ. ದಯಾನಂದ್ ಮತ್ತು ಪದಾಧಿಕಾರಿಗಳು, ಶಿರಂಗಾಲದ ಶ್ರೀನಿವಾಸ್ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಶೀಘ್ರದಲ್ಲಿ ಹಮ್ಮಿಕೊಳ್ಳಲಾಗುವದು ಎಂದು ಪ್ರಕಟಿಸಿದರು.

ಕೊಡಗು ಬಲಿಜ ಕ್ರೀಡಾಕೂಟ ವನ್ನು ಮೇ 19, 20 ರಂದು ನಡೆಸಲು ಉದ್ದೇಶಿಸಲಾಗಿದ್ದು, ಇದನ್ನು ಜಿಲ್ಲೆಯ ಬಲಿಜ ಜನಾಂಗದ ಪ್ರತಿ ಮನೆ ಮನೆ ಹಬ್ಬವೆಂದು ಪರಿಗಣಿಸಿ ಸಹಕರಿಸಲು ಇದೇ ಸಂದರ್ಭ ಮನವಿ ಮಾಡಿದರು. ಸೋಮವಾರಪೇಟೆ ತಾಲೂಕು ಅಧ್ಯಕ್ಷ ಟಿ.ಡಿ. ದಯಾನಂದ್ ಮಾತನಾಡಿ, ಇದೇ ಪ್ರಥಮ ಬಾರಿಗೆ ನಮ್ಮ ಆತಿಥ್ಯದಲ್ಲಿ ಮೂರು ತಾಲೂಕು ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಜಿಲ್ಲೆಯ ಬಲಿಜ ಜನಾಂಗ ರಾಜಕೀಯ ರಹಿತವಾಗಿ ಒಗ್ಗೂಡಬೇಕು ಎಂದು ಹೇಳಿದರು.

ವೀರಾಜಪೇಟೆ ತಾಲೂಕು ಬಲಿಜ ಸಮಾಜ ಅಧ್ಯಕ್ಷ ಗಣೇಶ್ ನಾಯ್ಡು ಅವರು ಮಾತನಾಡಿ, ವೀರಾಜಪೇಟೆ ತಾಲೂಕಿನಲ್ಲಿ ಕೆಲವು ನಿರ್ದೇಶಕರು ಅಸಹಾಕಾರ ಧೋರಣೆ ಹೊಂದಿರುವ ಹಿನ್ನೆಲೆ ಸಂಘದ ನೋಂದಾವಣೆ ಕಾರ್ಯ ನೆನೆಗುದಿಗೆ ಬಿದ್ದಿದೆ. ಸಂಘದ ಕಾರ್ಯಚಟುವಟಿಕೆಯಲ್ಲಿ ಪೂರಕ ಸ್ಪಂದಿಸದವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಮೂಲಕ ಶೀಘ್ರವಾಗಿ ನೋಂದಾವಣೆ ಪೂರ್ಣಗೊಳಿಸಲಾಗುವದು ಎಂದು ಮಾಹಿತಿ ನೀಡಿದರು.

ಮಡಿಕೇರಿ ತಾಲೂಕು ಅಧ್ಯಕ್ಷರ ಪರವಾಗಿ ಪ್ರಧಾನ ಕಾರ್ಯದರ್ಶಿ ಟಿ.ವಿ. ಲೋಕೇಶ್ ತಾಲೂಕಿನಲ್ಲಿ ಜರುಗುತಿರುವ ಅಭಿವೃದ್ಧಿಪರ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ಕುಶಾಲನಗರ ಅಮರ ನಾರಾಯಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸತೀಶ್ ನಾಯ್ಡು ಅವರು ಏಕೈಕ ಬಲಿಜ ಜನಾಂಗದ ಸಹಕಾರ ಬ್ಯಾಂಕ್ ಏಳಿಗೆಗೆ ಪ್ರತಿಯೋರ್ವರು ಸದಸ್ಯತನ ಹೊಂದಿಕೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಬಲಿಜ ಸಮಾಜ ಕಾರ್ಯದರ್ಶಿ ಟಿ.ಸಿ. ಗೀತಾ ನಾಯ್ಡು ಕೊಡಗು ಬಲಿಜ ಸಾಮಾಜಿಕ ಜಾಲತಾಣದ ಸಾಧಕ-ಬಾಧಕವನ್ನು ವಿವರಿಸಿದರು. ಸಭೆಯಲ್ಲಿ ಶಿರಂಗಾಲ ಶ್ರೀನಿವಾಸ್, ಮೂರ್ನಾಡುವಿನ ಸುಬ್ರಮಣಿ, ಹರೀಶ್ ಗುಡ್ಡೆಹೊಸೂರು, ಟಿ.ಆರ್. ಜಗದೀಶ್, ಪುಂಡರಿಕಾಕ್ಷ, ಬಾಲಕೃಷ್ಣ ಎನ್.ಜಿ. ಮುಂತಾದವರು ಮಾತನಾಡಿದರು.

ಈ ಸಂದರ್ಭ ಸೋಮವಾರ ಪೇಟೆ ತಾಲೂಕಿನಿಂದ ಜಿಲ್ಲಾ ಸಮಿತಿಗೆ ಟಿ.ಪಿ. ಹರೀಶ್ ಗುಡ್ಡೆಹೊಸೂರು, ಸುಮಾ ಸುಂಟಿಕೊಪ್ಪ, ಗಣೇಶ್ ಕುಶಾಲನಗರ, ಧರ್ಮಪ್ರಕಾಶ್ (ಮಹೇಶ್) ಚಂಗರಹಳ್ಳಿ ಹಾಗೂ ಶಿರಂಗಾಲ ಕುಮಾರ್ ಎಂಬವರನ್ನು ಆಯ್ಕೆ ಮಾಡಿರುವದಾಗಿ ಸೋಮವಾರಪೇಟೆ ತಾಲೂಕು ಅಧ್ಯಕ್ಷ ದಯಾನಂದ್ ಪ್ರಕಟಿಸಿದರು.

ಸಭೆಯಲ್ಲಿ ಜಿಲ್ಲಾ ಕ್ರೀಡಾ ಸಮಿತಿ ಸಂಚಾಲಕ ಮದನ್ ಕುಮಾರ್, ಸೋಮವಾರಪೇಟೆ ತಾಲೂಕು ಬಲಿಜ ಸಮಾಜ ಮಾಜಿ ಅಧ್ಯಕ್ಷ ಟಿ.ಎಸ್. ಬಾಲಕೃಷ್ಣ, ಮೂರ್ನಾಡುವಿನ ರಮೇಶ್ ನಾಯ್ಡು, ಯಶ್‍ವಂತ್, ಕುಶಾಲನಗರದ ಯಶೋದಮ್ಮ, ನಾಗೇಂದ್ರ ನಾಯ್ಡು, ಮದನ್, ಜಿಲ್ಲಾ ಸಮಿತಿಯ ಭವಾನಿ, ಅನುರಾಧ, ಲೋಕೇಶ್ವರಿ ಮುಂತಾದವರು ಉಪಸ್ಥಿತರಿದ್ದರು.