ಮಡಿಕೇರಿ, ಜ. 30: ದಕ್ಷಿಣ ಕೊಡಗಿನ ಮೂಲಕ ಕೇರಳದಿಂದ ರೈಲ್ವೇ ಸಂಪರ್ಕ ಹಾಗೂ ಹೆದ್ದಾರಿ ಯೋಜನೆಗಳಿಗೆ ವಿರೋಧದೊಂದಿಗೆ ಜಿಲ್ಲೆಗೆ ಎರಡು ತಾಲೂಕುಗಳ ರಚನೆಯಾಗಬೇಕೆಂಬ ನಿರ್ಣಯಗಳನ್ನು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಗಿದೆ.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸಭೆ ಆರಂಭವಾಗುತ್ತಿದ್ದಂತೆ ಸದಸ್ಯ ಬಾನಂಡ ಪ್ರಥ್ಯು ಅವರು, ಜಿಲ್ಲೆಗೆ ಹೊಸ ಹೊಸ ಮಾರಕ ಯೋಜನೆಗಳು ಬರುತ್ತಿವೆ. ಈಗಾಗಲೇ ಹೈಟೆನ್ಷನ್ ಯೋಜನೆಯಿಂದ ತತ್ತರಿಸಿ ಹೋಗಿದ್ದೇವೆ. ಇದೀಗ ಕೇರಳಕ್ಕೆ ಸಂಪರ್ಕ ಕಲ್ಪಿಸಲು ರೈಲ್ವೇ ಹಾಗೂ ಹೆದ್ದಾರಿ ಯೋಜನೆ ರೂಪುಗೊಳ್ಳುತ್ತಿವೆ. ಈ ಯೋಜನೆಗಳ ಅವಶ್ಯಕತೆಯಿಲ್ಲ ರೈಲ್ವೇ ಇಲ್ಲದಿದ್ದರೂ ಆಗುತ್ತದೆ ಈ ಯೋಜನೆಗಳು ಜಾರಿಯಾದಲ್ಲಿ ನಮ್ಮ ಗದ್ದೆ, ತೋಟಗಳು ನಾಶವಾಗಲಿವೆ ಎಂದು ಹೇಳಿದರು.
ಯಾವದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬಾರದು ಯೋಜನೆ ವಿರೋಧಿಸಿ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿದರು. ಧನಿಗೂಡಿಸಿದ ಸದಸ್ಯೆ ಚಂದ್ರಕಲಾ ಅವರು, ನಾವು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಯೋಜನೆಗಳು ಆಗುತ್ತಿವೆ. ಅಷ್ಟೊಂದು ವಿರೋಧವಿದ್ದರೂ ಹೈಟೆನ್ಷನ್ ಯೋಜನೆ ಜಾರಿಯಾಗಿದೆ. ಈ ಯೋಜನೆಗಳನ್ನು ಖಂಡಿಸಿ ನಿರ್ಣಯ ಮಾಡಿ ಸರಕಾರಕ್ಕೆ ಕಳುಹಿಸಿ ಕೊಡಬೇಕೆಂದು ಆಗ್ರಹಿಸಿದರು. ಸದಸ್ಯರುಗಳಾದ ವಿಜು ಸುಬ್ರಮಣಿ, ಶಶಿ ಸುಬ್ರಮಣಿ ಅವರುಗಳು ಕೂಡ ನಿರ್ಣಯ ಕೈಗೊಳ್ಳುವ ಬಗ್ಗೆ ಅಭಿಪ್ರಾಯಿಸಿದರು. ಅಂತಿಮವಾಗಿ ಅಧ್ಯಕ್ಷ ಹರೀಶ್ ಅವರು ಕೂಡ ನಿರ್ಣಯ ಕೈಗೊಳ್ಳುವ ಬಗ್ಗೆ ಪ್ರಕಟಿಸಿದರು.
ಇದೇ ಸಂದರ್ಭ ವಿಷಯ ಪ್ರಸ್ತಾಪಿಸಿದ ಸದಸ್ಯ ಪ್ರಥ್ಯು ಅವರು ಜಿಲ್ಲೆಯಲ್ಲಿ ಕುಶಾಲನಗರ ಹಾಗೂ ಪೊನ್ನಂಪೇಟೆ ತಾಲೂಕುಗಳಿಗೆ ಆಗ್ರಹಿಸಿ ಹೋರಾಟ ನಡೆಯುತ್ತಿದೆ. ಇದನ್ನು ಬೆಂಬಲಿಸಬೇಕು, ಈಗಾಗಲೇ ಕೊಡಗು ರಾಜ್ಯವಾಗಿದ್ದುದನ್ನು ಕಳೆದುಕೊಂಡಿದ್ದೇವೆ. ಮೂರು ಕ್ಷೇತ್ರಗಳಿದ್ದುದು ಎರಡಾಗಿದೆ. ಅಭಿವೃದ್ಧಿ ದೃಷ್ಟಿಯಿಂದ ಎರಡು ತಾಲೂಕುಗಳ ಅಗತ್ಯತೆಯಿದೆ. ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದಕ್ಕೆ ಎಲ್ಲಾ
(ಮೊದಲ ಪುಟದಿಂದ) ಸದಸ್ಯರುಗಳು ಬೆಂಬಲಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಪ್ರವಾಸೋದ್ಯಮಕ್ಕೆ ಗಡುವು
ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಳ್ಳಲಾಗುತ್ತಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಗಡುವು ನೀಡಲಾಯಿತು. ಇಲಾಖೆ ಕಾಮಗಾರಿ ಪ್ರಗತಿ ಪರಿಶೀಲನೆ ಸಂದರ್ಭ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಮಾಹಿತಿ ನೀಡುತ್ತಾ ಮಡಿಕೇರಿಯಲ್ಲಿ ಕೊಡವ ಹೆರಿಟೇಜ್ ಸೆಂಟರ್ ನಿರ್ಮಿಸುತ್ತಿರುವ ಬಗ್ಗೆ ಹೇಳಿದರು. ಈ ಸಂದರ್ಭ ಮಾತನಾಡಿದ ಸದಸ್ಯ ಮುರಳಿ ಕರುಂಬಮಯ್ಯ ಅವರು, ಹೆರಿಟೇಜ್ ಸೆಂಟರ್ ಕಾಮಗಾರಿ ಎಷ್ಟು ವರ್ಷದಿಂದ ನಡೆಯುತ್ತಿದೆ. ಬಿಡುಗಡೆಯಾದ ಅನುದಾನವೆಷ್ಟು, ಯಾವಾಗ ಪೂರ್ಣಗೊಳ್ಳುತ್ತದೆ ಎಂಬ ಬಗ್ಗೆ ಮಾಹಿತಿಬೇಕಿದೆ. ಯೋಜನೆ ವಿಳಂಬದ ಬಗ್ಗೆ ಆಗಾಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುತ್ತದೆ ಈ ಬಗ್ಗೆ ಮಾಹಿತಿ ನೀಡುವಂತೆ ಕೋರಿದರು.
ಪ್ರತಿಕ್ರಿಯಿಸಿದ ಅಧಿಕಾರಿ ಒಟ್ಟು ರೂ. 2.50 ಕೋಟಿ ಬಿಡುಗಡೆ ಯಾಗಿದ್ದು, ಬಹುತೇಕ ಕಾಮಗಾರಿ ಆಗಿದೆ. ಲೋಕೋಪಯೋಗಿ ಇಲಾಖೆ ವತಿಯಿಂದ ಕಾಮಗಾರಿ ನಿರ್ವಹಿಸ ಲಾಗುತ್ತಿದೆ ಎಂದು ಹೇಳಿದರು. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಯಲ್ಲಿ ಮಾಹಿತಿ ಬಯಸಿದ ಸಂದರ್ಭ ಪ್ರತಿಕ್ರಿಯಿಸಿದ ಅಭಿಯಂತರರು 2014ರಲ್ಲಿ ಆರಂಭಗೊಂಡ ಕಾಮಗಾರಿ 2015ರಲ್ಲಿ ಮುಗಿಯಬೇಕಿತ್ತು. ಗುತ್ತಿಗೆದಾರ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಇದೀಗ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ಕೈಗೊಂಡಿದ್ದು, ಬೇರೆ ಗುತ್ತಿಗೆದಾರರಿಗೆ ವರ್ಗಾಯಿಸಲಾಗಿದೆ. ಮೇ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಈವರೆಗೆ ರೂ. 160.31 ಲಕ್ಷ ವೆಚ್ಚವಾಗಿರುವದಾಗಿ ಮಾಹಿತಿ ನೀಡಿದರು.
ಸದಸ್ಯ ನೆಲ್ಲಚಂಡ ಕಿರಣ್ ಅವರು ಚೇಲಾವರ ಜಲಪಾತದಲ್ಲಿ ಸಾವುಗಳು ಸಂಭವಿಸುತ್ತಿದ್ದರೂ ಆಳವಾದ ಗುಂಡಿ ಮುಚ್ಚಲು ಕ್ರಮ ಕೈಗೊಂಡಿಲ್ಲ. ಹಿಂದಿನ ಸಭೆಯಲ್ಲಿ ಜಿಲ್ಲಾಧಿಕಾರಿಗಳೇ ಸಿಇಓ ಆಗಿದ್ದಾಗ ಈ ಬಗ್ಗೆ ಕ್ರಮಕ್ಕೆ ಸೂಚಿಸಿದ್ದರೂ ಮೂರೂವರೆ ತಿಂಗಳಾದರೂ ಆಗಿಲ್ಲ. ಒಂದು ಸಭೆ ಕೂಡ ನಡೆಸಿಲ್ಲವೆಂದು ಆರೋಪಿಸಿದರು. ಅನುದಾನ ಬಂದಿಲ್ಲವೆಂದು ಅಧಿಕಾರಿ ಮಾಹಿತಿ ನೀಡಿದಾಗ ಆಕ್ಷೇಪಿಸಿದ ಸದಸ್ಯ ಮುರಳಿ ತುರ್ತು ಕಾಮಗಾರಿಗಳಿಗೆ ಮುಂಗಡ ಪಾವತಿ ನಿಯಮದಡಿ ಕಾಮಗಾರಿ ನಿರ್ವಹಿಸಬಹುದಾಗಿದೆ ಎಂದು ಹೇಳಿದರು.
ಸದಸ್ಯ ದೀಪಕ್ ಅವರು ಮಲ್ಲಳ್ಳಿ ಜಲಪಾತದ ಬಳಿ ಅಪಾಯದ ಪರಿಸ್ಥಿತಿ ಇದೆ. ಶೌಚಾಲಯ ಇಲ್ಲ. ಅಪಾಯ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿಲ್ಲ. ಸಾಕಷ್ಟು ಪ್ರವಾಸಿಗರು ಬರುತ್ತಿದ್ದಾರೆ. ಈ ಬಗ್ಗೆ ಕೂಡ ಹಿಂದಿನ ಸಭೆಯಲ್ಲಿ ಪ್ರಸ್ತಾಪಿಸಿದಾಗ ಜಿಲ್ಲಾಧಿಕಾರಿಗಳು 15 ದಿನಗಳಲ್ಲಿ ಕ್ರಮ ಕೈಗೊಳ್ಳಲು ಸೂಚಿಸಿದ್ದರೂ ಇನ್ನೂ ಆಗಿಲ್ಲವೆಂದು ಆಕ್ಷೇಪಿಸಿದರು. ಸದಸ್ಯ ಪ್ರಥ್ಯು ಮಾತನಾಡಿ, ಒಂದೇ ಇಲಾಖೆಯಲ್ಲಿ ಇಷ್ಟೊಂದು ನೂನ್ಯತೆಗಳಿದ್ದರೂ ಸರಿಯಾದ ಕ್ರಮ ಜರುಗುತ್ತಿಲ್ಲ. ಸಭೆ ನಡೆಸಿ ಏನು ಪ್ರಯೋಜನವೆಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಅವರು ಚೇಲಾವರ ಸಮಸ್ಯೆಗೆ ಸಂಬಂಧಿಸಿದಂತೆ ಮೂರು ದಿವಸಗಳೊಳಗೆ ಸಭೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅಧ್ಯಕ್ಷ ಹರೀಶ್ ಅವರು 15 ದಿವಸಗಳೊಳಗೆ ಮಲ್ಲಳ್ಳಿ ಜಲಪಾತಗಳ ಬಳಿ ಸೌಲಭ್ಯ ಕಲ್ಪಿಸಬೇಕು, ಮೇ ಅಂತ್ಯದೊಳಗೆ ಕೊಡವ ಹೆರಿಟೇಜ್ ಸೆಂಟರ್ ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು. ಹೆರಿಟೇಜ್ ಸೆಂಟರ್, ಮಲ್ಲಳ್ಳಿ ಚೇಲಾವರ ಜಲಪಾತಗಳಲ್ಲಿನ ಸಮಸ್ಯೆಗಳ ಬಗ್ಗೆ ‘ಶಕ್ತಿ’ ಹಲವಾರು ಬಾರಿ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಚರ್ಚೆಯಲ್ಲಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಲತೀಫ್ ಇನ್ನಿತರ ಸದಸ್ಯರು ಭಾಗಿಯಾದರು.