ಮಡಿಕೇರಿ, ಜ. 31: ಸಾರ್ವತ್ರಿಕ ಮಾನವೀಯ ಮೌಲ್ಯ ಮತ್ತು ವೃತ್ತಿ ನೈತಿಕತೆ ಆಧರಿಸಿದ ಸರ್ಟಿಫಿಕೇಟ್ ಕೋರ್ಸ್‍ಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು.

ಮೂವತ್ತು ಗಂಟೆಗಳ ‘ಸಾರ್ವತ್ರಿಕ ಮಾನವೀಯ ಮೌಲ್ಯ ಮತ್ತು ವೃತ್ತಿ ನೈತಿಕತೆ’ ತರಬೇತಿಯಲ್ಲಿ ಮಾನವೀಯ ಮೌಲ್ಯ ವೃದ್ಧಿಗೆ ಪೂರಕ ವಿಷಯಗಳಾದ ಸ್ವಯಂ ಪ್ರಜ್ಞೆ, ಯೋಗ, ಆತ್ಮಗೌರವ, ಪ್ರಾಮಾಣಿಕತೆ, ಧನಾತ್ಮಕ ಚಿಂತನೆ, ವ್ಯಕ್ತಿತ್ವ ವಿಕಸನ, ನಡವಳಿಕೆ ಮತ್ತು ಶಿಷ್ಟಾಚಾರ, ಸಮಯ ನಿರ್ವಹಣೆ ಮತ್ತು ಸಮಯ ಪ್ರಜ್ಞೆ, ಶಿಸ್ತು ಮತ್ತು ಜವಾಬ್ದಾರಿ, ಒತ್ತಡ ನಿರ್ವಹಣೆ, ಜೀವನ ಕೌಶಲ್ಯ, ನಾಯಕತ್ವ ಕೌಶಲ್ಯ, ಮಾನವ ಸಂಬಂಧಗಳು, ಕೌಟುಂಬಿಕ ಮೌಲ್ಯ ಸೇರಿದಂತೆ ವಿವಿಧ ವಿಷಯಗಳ ಕುರಿತು ತಿಳಿಯಪಡಿಸಲಾಗುವದು ಎಂದು ಪ್ರಕಟಣೆ ತಿಳಿಸಿದೆ. ಒತ್ತಡದ ಜೀವನ ಶೈಲಿ ಹಾಗೂ ಮಾನವೀಯ ಮೌಲ್ಯಗಳು ಕುಂದುತ್ತಿರುವ ಪ್ರಸಕ್ತ ಜನಮಾನಸದಲ್ಲಿ ಮಾನಸಿಕ ಶಾಂತಿ ಹಾಗೂ ಜೀವನ ಮೌಲ್ಯಗಳನ್ನು ಪಸರಿಸುವ ಉದ್ದೇಶದಿಂದ ಪರಿಚಯಿಸಲಾದ ಈ ತರಬೇತಿಯಲ್ಲಿ ವಿವಿಧ ಧರ್ಮಗಳ ಪ್ರತಿಪಾದಕರು ಭಾಗವಹಿಸಿ ಮಾನಸಿಕ ನೆಮ್ಮದಿ, ಧರ್ಮ ಸಂದೇಶದ ಅಗತ್ಯತೆ ಹಾಗೂ ವಿಶ್ವಶಾಂತಿಯ ಸಂದೇಶ ಸಾರಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬ್ರಹ್ಮಕುಮಾರಿ ಸಂಸ್ಥೆಯ ಬ್ರಹ್ಮಕುಮಾರಿ ಧನಲಕ್ಷ್ಮಿ, ಸಮಾಜದಲ್ಲಿ ಶಾಂತಿ ನೆಲೆಯೂರಬೇಕಿದ್ದರೆ, ವೈಯಕ್ತಿಕ ನೆಮ್ಮದಿ ಮುಖ್ಯವಾಗಿದ್ದು, ಈ ಹಿನ್ನೆಲೆ ದ್ಯಾನ ಮಾಡುವ ಮೂಲಕ ನೆಮ್ಮದಿ ಕಂಡುಕೊಳ್ಳಬಹುದು ಎಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಶಾಂತಿ ದೇವಾಲಯದ ರೆವರೆಂಡ್ ಫಾದರ್ ಅಮೃತ್‍ರಾಜ್, ಜಮಾಅತ್ ಎ ಇಸ್ಲಾಮಿ ಹಿಂದ್‍ನ ರಾಜ್ಯ ಸಲಹಾ ಸಮಿತಿಯ ಸದಸ್ಯ ಎಂ.ಹೆಚ್. ಮಹಮ್ಮದ್ ಕುಂಞÂ ಭಾಗವಹಿಸಿದ್ದರು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಗಳ ಸಂಯೋಜಕ ಡಾ. ಶ್ರೀಧರ್ ಹೆಗಡೆ, ಕಾಲೇಜಿನ ಆಂತರಿಕ ಗುಣಮಟ್ಟ ಖಾತ್ರಿ ಘಟಕದ ಸಂಯೋಜಕ ರವಿಶಂಕರ್ ಎಂ.ಎನ್. ಉಪಸ್ಥಿತರಿದ್ದರು. ನೋಂದಣಿ ಪಡೆದ 150 ವಿದ್ಯಾರ್ಥಿಗಳು, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.