ಮಡಿಕೇರಿ, ಜ.31: ಭಾಗಮಮಡಲ - ತಲಕಾವೇರಿ ವ್ಯವಸ್ಥಾಪನಾ ಸಮಿತಿ ರಚನೆ ಇತ್ತೀಚೆಗೆ ಘೋಷಣೆ ಯಾಗಿದ್ದರೂ ಓರ್ವ ಸದಸ್ಯರ ನೇಮಕಾತಿಯಾಗದೆ ಅಪೂರ್ಣ ಗೊಂಡಿತ್ತು. ಇದೀಗ ಆ ಸ್ಥಾನಕ್ಕೆ ನಾಪೋಕ್ಲು ಕೊಳಕೇರಿ ಗ್ರಾಮದ ಬಿದ್ದಾಟಂಡ ಎಸ್ ತಮ್ಮಯ್ಯ ಅವರನ್ನು ನೇಮಿಸಿ ರಾಜ್ಯ ಧಾರ್ಮಿಕ ಪರಿಷತ್‍ನ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಇದರಿಂದ ಸಮಿತಿ ರಚನೆ ಪ್ರಕ್ರಿಯೆ ಪೂರ್ಣಗೊಂಡಿದೆ.ಸಾಮಾನ್ಯ ವರ್ಗದ ಒಂದು ಸ್ಥಾನಕ್ಕೆ ಬಿ.ಎಸ್. ತಮ್ಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.ಇವರು ಈ ಹಿಂದೆ ಭಾಗಮಂಡಲ- ತಲಕಾವೇರಿ ಜೀರ್ಣೋದ್ಧಾರ ಸಮಿತಿ ಹಾಗೂ ಪುನರ್ ಪ್ರತಿಷ್ಠಾಪನಾ

(ಮೊದಲ ಪುಟದಿಂದ) ಸಮಿತಿಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಇತ್ತೀಚೆಗೆ 8 ಮಂದಿ ಸದಸ್ಯರು ಗಳನ್ನು ನೇಮಕ ಮಾಡಲಾಗಿದ್ದು, ಇದೀಗ 9 ಮಂದಿಯ ಸಮಿತಿ ರಚನಾ ಕಾರ್ಯ ಪೂರ್ಣಗೊಂಡಿದೆ.

ಈ ಹಿಂದೆ ವ್ಯವಸ್ಥಾಪನಾ ಸಮಿತಿಗೆ ಆಯ್ಕೆಗೊಂಡಿದ್ದ 8 ಮಂದಿ ಸದಸ್ಯರುಗಳೆಂದರೆ, ಸಾಮಾನ್ಯ ಪ್ರವರ್ಗದಿಂದ ನಾಪೋಕ್ಲು ಹಳೆ ತಾಲೂಕುವಿನ ಡಾ. ಸಣ್ಣುವಂಡ ಎಂ. ಕಾವೇರಪ್ಪ. ಇವರು ಈ ಹಿಂದೆ ಭಾಗಮಂಡಲ- ತಲಕಾವೇರಿ ಪುನರ್ ಪ್ರತಿಷ್ಠಾಪನಾ ಸಮಿತಿಯ ಪದಾಧಿಕಾರಿ ಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಕಾಫಿ ಮಂಡಳಿಯ ಉಪಾಧ್ಯಕ್ಷ ರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಭಾಗಮಂಡಲ ಚೇರಂಗಾಲ ಗ್ರಾಮದ ಕೋಡಿ ಯು ಮೋಟಯ್ಯ ಅವರು ಸಾಮಾನ್ಯ ಪ್ರವರ್ಗದಿಂದ ಸದಸ್ಯರಾಗಿ ಆಯ್ಕೆಯಾಗಿದ್ದು ಪ್ರಸ್ತುತ ಇವರು ತಲಕಾವೇರಿಯಲ್ಲಿ ದೇವಾಲಯ ತಕ್ಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಮಹಿಳಾ ಪ್ರವರ್ಗದಿಂದ ಭಾಗಮಂಡಲ ಚೇರಂಗಾಲ ಗ್ರಾಮದ ನಿಡ್ಯಮಲೆ ಮೀನಾಕ್ಷಿ ಸುರೇಶ್ ಆಯ್ಕೆಗೊಂಡಿದ್ದಾರೆ. ಮತ್ತೋರ್ವರು ಮಹಿಳೆ ವಿಜಯಪುರದ ಲಕ್ಷ್ಮಿ ಶ್ರೀ ವಿ ಕುಲಕರ್ಣಿ, ಪರಿಶಿಷ್ಟ ವರ್ಗದಿಂದ ಕುಂದಚೇರಿ ಗ್ರಾಮದ ಕೆ.ಎಸ್. ಅಣ್ಣಯ್ಯ, ಸ್ಥಳೀಯ ಪ್ರವರ್ಗದಿಂದ ಕುಂದಚೇರಿ ಗ್ರಾಮದ ಕೆದಂಬಾಡಿ ಟಿ.ರಮೇಶ್ ಹಾಗೂ ಸಾಮಾನ್ಯ ಪ್ರವರ್ಗದಿಂದ ಕಕ್ಕಬ್ಬೆ ಕುಂಜಿಲ ಗ್ರಾಮದ ಉದಿಯಂಡ ಪಿ. ಸುಭಾಶ್ ಆಯ್ಕೆಗೊಂಡಿದ್ದಾರೆ. ಅರ್ಚಕ ವಿಭಾಗದಿಂದ ತಲಕಾವೇರಿಯ ರಾಜೇಶಾಚಾರ್ ಆಯ್ಕೆಗೊಂಡಿದ್ದಾರೆ.

ಮುಜರಾಯಿ ಇಲಾಖಾ ನಿಯಮದಂತೆ ವ್ಯವಸ್ಥಾಪನಾ ಸಮಿತಿಯ ಪದನಿಮಿತ್ತ ಕಾರ್ಯದರ್ಶಿ ಯಾಗಿ ಪ್ರಸ್ತುತ ಕಾರ್ಯ ನಿರ್ವಾಹಕಾಧಿಕಾರಿಯಾಗಿರುವ ಜಗದೀಶ್ ಕುಮಾರ್ ಅವರು ಕಾರ್ಯ ನಿರ್ವಹಿಸುತ್ತಾರೆ.

ವ್ಯವಸ್ಥಾಪನಾ ಸಮಿತಿಯ ಪ್ರಥಮ ಸಭೆ ಫೆ. 6 ರಂದು ನಡೆಯಲಿದ್ದು ಆ ದಿನ ಸಮಿತಿಯ ಅಧ್ಯಕ್ಷರ ಆಯ್ಕೆ ನಡೆಯಲಿರುವದಾಗಿ ಹೇಳಲಾಗಿದೆ.