ಕೂಡಿಗೆ, ಜ. 31: ಮಕ್ಕಳು ಬುದ್ಧಿವಂತಿಕೆಯ ಜೊತೆಗೆ ಹೃದಯವಂತಿಕೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕೊಡಗು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಮ್ತಾಜ್ ಹೇಳಿದರು.
ಅವರು ಕೊಡಗು ಜಿಲ್ಲಾ ಬಾಲಭವನ ಹಾಗೂ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲಾ ಸಭಾಂಗಣದಲ್ಲಿ ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ‘ವಾರಾಂತ್ಯ ಕಾರ್ಯಾಗಾರವನ್ನು’ ಮಕ್ಕಳಿಂದ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳು ಬಾಲ್ಯದಿಂದಲೇ ಪ್ರೀತಿ ವಿಶ್ವಾಸ ಸಹನೆ ಕರುಣೆಯಂತಹ ಗುಣಗಳನ್ನು ಅಳವಡಿಸಿಕೊಂಡರೆ ಭವಿಷ್ಯ ಉಜ್ವಲವಾಗುವದರ ಜೊತೆಗೆ ಸಮಾಜದಲ್ಲಿ ಶಾಂತಿಯುತ ಸಹಬಾಳ್ವೆಯಲ್ಲಿ ನಡೆಸಲು ಅನುಕೂಲವಾಗುತ್ತದೆ ಎಂದರು.
ಬಸವನಹಳ್ಳಿಯ ಲ್ಯಾಂಪ್ಸ್ ಸೊಸೈಟಿಯ ನಿರ್ದೇಶಕ ಮೋಹನ್ ಮಾತನಾಡಿ ಮಕ್ಕಳ ಕ್ರಿಯಾಶೀಲ ಚಟುವಟಿಕೆಗಳ ಮೇಲೆ ಪೋಷಕರು ನಿಗಾವಹಿಸುವ ಮೂಲಕ ಮಕ್ಕಳಿಗೆ ಆಸಕ್ತಿ ಇರುವ ವಿಷಯಗಳ ಕಲಿಕೆಗಾಗಿ ಪ್ರೋತ್ಸಾಹಿಸಬೇಕೆಂದರು. ಈ ಸಂದರ್ಭ ಆಶ್ರಮ ಶಾಲೆಯ ಮುಖ್ಯ ಶಿಕ್ಷಕಿ ಶಶಿ, ಸಮಾಜ ವಿಜ್ಞಾನ ಶಿಕ್ಷಕ ಕರಿಯಪ್ಪ, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸದಸ್ಯ ಡಾಟಿ. ಸೇರಿದಂತೆ ಇನ್ನಿತರರು ಹಾಜರಿದ್ದರು.