ಗೋಣಿಕೊಪ್ಪ ವರದಿ, ಜ. 31 : ಜಾಂಡೀಸ್ ಖಾಯಿಲೆಗೆ ಒಳಗಾಗಿ ಪಟ್ಟಣದ ರಸ್ತೆ ಬದಿಯಲ್ಲಿ ಜೀವನ ಸಾಗಿಸುತ್ತಿದ್ದ ವೃದ್ಧನನ್ನು ಗೋಣಿಕೊಪ್ಪ ಕಾವೇರಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಸೇವಕರುಗಳು ಆಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದರು.

ಜಾಂಡೀಸ್ ಖಾಯಿಲೆಯಿಂದ ಬಳಲುತ್ತಿದ್ದ ರಮೇಶ್ (46) ಎಂಬವವರು ಸ್ಥಳೀಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಸಮೀಪ ರಸ್ತೆ ಬದಿಯಲ್ಲಿ ಬದುಕು ಸಾಗಿಸುತ್ತಿದ್ದರು. ಇದನ್ನು ಗಮನಿಸಿದ ಗೋಣಿಕೊಪ್ಪ ಕಾವೇರಿ ಕಾಲೇಜಿನ ಎನ್.ಎಸ್.ಎಸ್ ಘಟಕದ ಸೇವಕರುಗಳು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ನಂತರ ವೃದ್ಧನ ಕುಟುಂಬಸ್ಥರಿಗೆ ಒಪ್ಪಿಸಲಾಯಿತು. ಎನ್.ಎಸ್.ಎಸ್ ಘಟಕದ ಯೋಜನಾಧಿಕಾರಿ ಎಂ. ಎನ್ ವನಿತ್‍ಕುಮಾರ್ ಅವರ ಮಾರ್ಗದರ್ಶನದಲ್ಲಿ ಸೇವಕರುಗಳಾದ ಪುಷ್ಷರಾಜ್, ವಿಘ್ನೇಶ್ ಕುಮಾರ್, ಲಾರೆನ್ಸ್, ಪ್ರದೀಪ್, ಕೃಷ್ಣ, ಅಶೋಕ್, ನಿತಿನ್, ಹರ್ಷ, ದಿನೇಶ್, ನವೀನ್ ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾದರು.