ವೀರಾಜಪೇಟೆ, ಜ. 31: ವೀರಾಜಪೇಟೆಯ ಹಳೆ ತಾಲೂಕು ಕಚೇರಿಯ ಸ್ಥಳದಲ್ಲಿಯೇ ನಿರ್ಮಾಣವಾಗಿರುವ ಮಿನಿ ವಿಧಾನಸೌಧವನ್ನು ಫೆಬ್ರವರಿ ಎರಡನೇ ವಾರದಲ್ಲಿ ಉಸ್ತುವಾರಿ ಸಚಿವರಿಂದ ಉದ್ಘಾಟನೆ ಮಾಡಲಾಗುವದು.
ಕಟ್ಟಡದ ಗುತ್ತಿಗೆದಾರರ ಹಾಗೂ ಇಲಾಖೆ ಅಧಿಕಾರಿಗಳು ತೆಗೆದುಕೊಂಡ ನಿಲುವಿನ ಮೇರೆ ಮಿನಿ ವಿಧಾನಸೌಧದ ಉದ್ಘಾಟನೆಯನ್ನು ಜ. 26 ರಂದು ನಿಗದಿಪಡಿಸಲಾಗಿತ್ತು. ಆದರೆ ಗುತ್ತಿಗೆದಾರರ ಪ್ರಕಾರ ಇನ್ನೂ ಕಾಮಗಾರಿ ಶೇ. 5 ರಷ್ಟು ಬಾಕಿ ಇರುವದರಿಂದ ಇದನ್ನು ಪೂರ್ಣಗೊಳಿಸಿ ಕಟ್ಟಡವನ್ನು ತಾಲೂಕು ಕಚೇರಿ ಸುಪರ್ದಿಗೆ ಕೊಡಲಾಗುವದು. ನಂತರ ಸ್ಥಳಾಂತರಕ್ಕೆ 15 ದಿನಗಳ ಕಾಲಾವಕಾಶ ನೀಡಿ ಮಾರ್ಚ್ 1ರಿಂದ ತಾಲೂಕು ಕಚೇರಿಯನ್ನು ಹೊಸ ಕಟ್ಟಡದಲ್ಲಿ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಕಟ್ಟಡದ ಒಳಾಂಗಣವನ್ನು ಪರಿಶೀಲಿಸಿದ ಗೋವಿಂದರಾಜು ತಿಳಿಸಿದರು.
ಭದ್ರತಾ ಕೊಠಡಿ
ಹೊಸ ಕಟ್ಟಡದಲ್ಲಿ ತಾಲೂಕು ಕಚೇರಿ ಆರಂಭಗೊಂಡ ನಂತರ ಚುನಾವಣಾ ಆಯೋಗದ ನಿರ್ದೇಶನದಂತೆ ಮಿನಿ ವಿಧಾನಸೌಧ ಹಾಗೂ ತಾಲೂಕು ಕಚೇರಿಗೆ ಹೊಂದಿಕೊಂಡಂತೆ ಆಧುನಿಕ ಭದ್ರತಾ ಕೊಠಡಿಯನ್ನು ನಿರ್ಮಿಸಲು ಪೂರ್ವ ಸಿದ್ಧತೆ ನಡೆದಿದೆ.