ಮಡಿಕೇರಿ, ಜ. 31: ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ನಾಪೋಕ್ಲು ಬಳಿಯ ಕೊಳಕೇರಿಯ ಮಖಾಂ ಉರೂಸ್ ಅನ್ನು ತಾ. 2 ರಿಂದ 8ರವರೆಗೆ ನಡೆಸಲು ಕೊಳಕೇರಿ ಜಮಾಅತ್ ತೀರ್ಮಾನಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಳಕೇರಿ ಜಮಾಅತ್‍ನ ಅಧ್ಯಕ್ಷರಾದ ಟಿ.ಹೆಚ್. ಮೊಯ್ದೀನ್ ಕುಟ್ಟಿ ಹಾಜಿ, ತಾ.2 ಧ್ವಜಾರೋಹಣವನ್ನು ತಾನು ನೆರವೇರಿಸುವ ಮೂಲಕ ಉರೂಸ್ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಸ್ಥಳೀಯ ಮುದರ್ರಿಸ್ ವಿ.ಪಿ.ಎಂ. ಕುಟ್ಟಿ ಮಳಾಹಿರಿ ಅವರ ನೇತೃತ್ವದಲ್ಲಿ ಮಖಾಂ ಅಲಂಕಾರ ಹಾಗೂ ಸಾಮೂಹಿಕ ಝಿಯಾರತ್ ಕಾರ್ಯಕ್ರಮ ನಡೆಯಲಿದೆ. ಅಂದು ರಾತ್ರಿ ಸಯ್ಯಿದ್ ಜಾಫರ್ ಸ್ವಾದಿಖ್ ತಂಙಳ್ ಕುಂಬೋಳ್ ಅವರ ನೇತೃತ್ವದಲ್ಲಿ ಜಲಾಲಿಯಾ ರಾತೀಬ್ ನಡೆಯಲಿದೆ ಎಂದು ತಿಳಿಸಿದರು.

ತಾ. 3 ರಂದು ರಾತ್ರಿ 8 ಗಂಟೆಗೆ ಎಸ್.ಎಂ.ಎ. ರಾಜ್ಯಧ್ಯಕ್ಷರಾದ ಸಯ್ಯಿದ್ ಜಲಾಲುದ್ದೀನ್ ಅಲ್‍ಹಾದಿ ಉಜಿರೆ ಅವರ ನೇತೃತ್ವದಲ್ಲಿ ಖತಂ ದುಆ ಹಾಗೂ ದ್ಸಿಕ್ರ್ ಹಲ್ಖಾ ನಡೆಯಲಿದ್ದು, ತಾ. 4 ರಂದು ರಾತ್ರಿ 8 ಗಂಟೆಗೆ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ತಾ. 5 ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಅಧ್ಯಾತ್ಮಿಕ ಮಜ್ಲಿಸ್ ಸಯ್ಯಿದ್ ಫಝಲ್ ಕೋಯಮ್ಮ ನೇತೃತ್ವದಲ್ಲಿ ನಡೆಯಲಿದೆ. ಅಂದು ಮಧ್ಯಾಹ್ನ 1.30ಕ್ಕೆ ಜಮಾಅತ್ ಅಧ್ಯಕ್ಷರ ಅಧ್ಯಕ್ಷತೆ ಯಲ್ಲಿ ಸಾರ್ವಜನಿಕ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

ತಾ. 6 ರಂದು ರಾತ್ರಿ 8 ಗಂಟೆಗೆ ನಡೆಯುವ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕೌಟುಂಬಿಕ ಜೀವನ’ ಎಂಬ ವಿಷಯದ ಕುರಿತು ಖ್ಯಾತ ವಾಗ್ಮಿ ರಫೀಖ್ ಸಅದಿ ದೇಲಂಪಾಡಿ ಭಾಷಣ ಮಾಡಲಿದ್ದಾರೆ. ತಾ. 7 ರಂದು ರಾತ್ರಿ ಅಧ್ಯಾತ್ಮಿಕ ನಾಯಕರಾದ ಸಯ್ಯಿದ್ ಅಬ್ದುರ್ರಹ್ಮಾನಿ ಇಂಬಿಚ್ಚಿಕ್ಕೋಯ ಅಲ್ ಬುಖಾರಿ ಅವರ ನೇತೃತ್ವದಲ್ಲಿ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ. ತಾ. 8 ರಂದು ಕೊಳಕೇರಿ ಮಖಾಂ ಉರೂಸ್‍ನ ಸಮಾರೋಪ ಸಮಾರಂಭ ನಡೆಯಲಿರುವದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಕೊಳಕೇರಿ ಜಮಾಅತ್‍ನ ಕಾರ್ಯದರ್ಶಿಗಳಾದ ಕೆ.ಎಂ. ಷಂಶುದ್ದೀನ್, ಸಂಚಾಲಕರಾದ ಸಿ.ಎಂ. ಮೂಸ, ಎಂ.ಎ. ಹಮೀದ್ ಮುಸ್ಲಿಯಾರ್, ಕೆ.ವೈ. ಸುಲೈಮಾನ್ ಉಪಸ್ಥಿತರಿದ್ದರು.