ಬಸವನ ಹಳ್ಳಿಯ ಮೊರಾರ್ಜಿದೇಸಾಯಿ ವಸತಿ ಶಾಲೆಯಲ್ಲಿ ತಾ. 31 ರಂದು ನಡೆಯಲಿರುವ ಕೊಡಗು ಜಿಲ್ಲಾ ಮಟ್ಟದ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಆಯ್ಕೆಗೊಂಡಿರುವ ಸೋಮವಾರಪೇಟೆಯ ಕುಮಾರಿ ಸಿಂಚನಾ ಅವರ ಬಹುಮುಖ ಪ್ರತಿಭೆಯ ಒಂದು ಕಿರು ಪರಿಚಯ ಇಲ್ಲ್ಲಿದೆ.

ವಿವಿಧ ಕ್ಷೇತ್ರಗಳಲ್ಲಿ ತನ್ನ ಬಹುಮುಖ ಪ್ರತಿಭೆಯಿಂದ ರಾಷ್ಟ್ರ, ರಾಜ್ಯ ಮತ್ತು ಜಿಲ್ಲೆಯಲ್ಲಿ ಸಾಧನೆ ಮಾಡಿ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದಿರುವ ಕು. ಸಿಂಚನ ಅವರು ಸೋಮವಾರಪೇಟೆಯ ಕಾಂಚನ ಮತ್ತು ಮಧು ದಂಪತಿಗಳ ಪುತ್ರಿಯಾಗಿದ್ದು, ದಿನಾಂಕ 17.7.2002ರಂದು ಸೋಮವಾರಪೇಟೆಯಲ್ಲಿ ಜನಿಸಿದವರು.

ತನ್ನ ಎರಡನೇ ತರಗತಿಯಿಂದಲೇ ಆಲೂರು ಸಿದ್ದಾಪುರ ಗ್ರಾಮದ ‘‘ಜಾನಕಿ ಕಾಳಪ್ಪ’’ ಶಾಲೆಯಲ್ಲಿ ನಡೆದ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಇವರು ನಂತರದ ವರ್ಷಗಳಲ್ಲಿ ಪ್ರಶಸ್ತಿಗಳ ಸಾಲಿನ ಪಟ್ಟಿಗೆ ತಮ್ಮ ಹೆಸರನ್ನು ದಾಖಲಿಸುತ್ತಾ ಬಂದರು. ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ಸಾರ್ವಜನಿಕ ಶಿಕ್ಷಣ ಇಲಾಖೆಯವರು 2010-11, 2011-12 ಹಾಗೂ 12-13ರಲ್ಲಿ ನಡೆಸಿದ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ಲಘು ಸಂಗೀತ, ಅಭಿನಯಗೀತೆ, ಕಂಠಪಾಠ ಸ್ಪರ್ಧೆಯಲ್ಲಿ ತಾಲೂಕು ಮಟ್ಟ, ಜಿಲ್ಲಾ ಮಟ್ಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸ್ಥಳೀಯ ಸಂಘ ಸಂಸ್ಥೆಗಳು ನಡೆಸುವ ಸಂಗೀತ, ನೃತ್ಯ ಮತ್ತು ಛದ್ಮವೇಷ ಸ್ಪರ್ಧೆಗಳಲ್ಲಿ ಬಹುಮಾನ ಪಡೆಯುತ್ತಾ ಬಂದಿದ್ದಾರೆ. 2012-13ರಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕರ್ನಾಟಕ ಪ್ರಗತಿಪರ ಸೇವಾಸಂಸ್ಥೆ ನಡೆಸಿದ ಚಿತ್ರಕಲೆ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ 5ನೇ ಸ್ಥಾನ ಪಡೆದು ಅದೇ ವರ್ಷ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ 20ನೇ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ನಂತರ ದೆಹಲಿಯಲ್ಲಿ ನಡೆದ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾಗಿದ್ದರು.

ಕೊಡಗು ಜಿಲ್ಲೆಯ 2013ರ ಬಿದ್ದಂಡ ಪೂವಯ್ಯ ಸ್ಮಾರಕ ಜಿಲ್ಲಾ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಮೈಸೂರಿನಲ್ಲಿ 2015-16ರ ಸಾಲಿನ ರಾಜ್ಯಮಟ್ಟದ ಕರಾಟೆ ಮತ್ತು ಯೋಗ ಸ್ಪರ್ಧೆಯ ಕುಮಿತೆಯಲ್ಲಿ ಪ್ರಥಮ ಖತಾದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. 2015-16ರ ಕಲಾಶ್ರೀ ಆಯ್ಕೆ ಶಿಬಿರದಲ್ಲಿ ಸೃಜನಾತ್ಮಕ ಪ್ರದರ್ಶನ ಸ್ಪರ್ಧೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ, ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಕಲಾಶ್ರೀ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಇದರೊಂದಿಗೆ ಹಲವಾರು ಕವನಗಳನ್ನು ರಚಿಸುತ್ತಾ ತಾಲೂಕು, ಜಿಲ್ಲೆ, ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಹನ್ನೊಂದನೇ ಜಿಲ್ಲಾಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿದ್ದಾರೆ. ಅದರಂತೆ 2017-18ರ ಸಾಲಿನ ಜಿಲ್ಲಾಮಟ್ಟದ ದಸರಾ ಕವಿಗೋಷ್ಠಿಗೆ ಆಯ್ಕೆಯಾಗಿದ್ದು, ಗೋಣಿಕೊಪ್ಪ ಮತ್ತು ಮಡಿಕೇರಿಯಲ್ಲಿ ಭಾಗವಹಿಸಿದ್ದಾರೆ. ಹಲವಾರು ಬೇಸಿಗೆ ಶಿಬಿರದಲ್ಲಿ ಭಾಗವಹಿಸಿ ನೃತ್ಯ,ಸಂಗೀತ, ಕ್ರಾಫ್ಟ್,ನಿರೂಪಕಿ,ಗಾಜಿನ ಚಿತ್ರಕಲೆ ವಿನ್ಯಾಸ ಸೇರಿ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ. 2017-18ರ ಸಾಲಿನಲ್ಲಿ ಸರ್ಕಾರದಿಂದ ಜಿಲ್ಲಾಮಟ್ಟದ ಅಸಾಧಾರಣ ಪ್ರತಿಭೆ ಪ್ರಶಸ್ತಿ ಪಡೆದಿದ್ದಾರೆ.