ಮಡಿಕೇರಿ, ಜ. 29: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಕೋಮು ಪ್ರಚೋದನೆ ಮಾಡಿ ರಾಜ್ಯದಲ್ಲಿ ಅಶಾಂತಿಯ ವಾತಾವರಣ ನಿರ್ಮಿಸುವದರೊಂದಿಗೆ ಹಿಂದೂಗಳ ಶವಗಳನ್ನು ಮುಂದಿಟ್ಟು ಬಿಜೆಪಿ; ಮುಸಲ್ಮಾನರ ಶವಗಳನ್ನು ಮುಂದಿಟ್ಟು ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಯುವ ಜೆಡಿಎಸ್ ರಾಜ್ಯಾಧ್ಯಕ್ಷ ಶಾಸಕ ಮಧು ಬಂಗಾರಪ್ಪ ಟೀಕಿಸಿದರು.ಕರ್ನಾಟಕ ಜನತಾ ದಳದ ಯುವ ಘಟಕದ ವತಿಯಿಂದ ನಗರದ ಮೇಲಿನ ಗೌಡ ಸಮಾಜದಲ್ಲಿ ಏರ್ಪಡಿಸಲಾಗಿದ್ದ ಯುವ ಜೆಡಿಎಸ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ರಾಷ್ಟ್ರೀಯ ಪಕ್ಷಗಳು ರಾಜಕೀಯ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆ ರೋಸಿ ಹೋಗಿದ್ದು, ಬದಲಾವಣೆ ಬಯಸಿದ್ದಾರೆ. ರಾಜ್ಯದ ಸುಭೀಕ್ಷೆಗಾಗಿ ಜೆಡಿಎಸ್ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡುವ ಅನಂತ್ ಕುಮಾರ್ ಹೆಗಡೆ ತಮ್ಮ ನಿಲುವನ್ನು ಬದಲಿಸಿಕೊಳ್ಳದಿದ್ದರೆ ಯುವ ಜೆಡಿಎಸ್ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದೆ ಎಂದರು. ಕೆಜೆಪಿಯಲ್ಲಿದ್ದಾಗ ಟಿಪ್ಪು ಟೋಪಿ ಧರಿಸಿದ್ದ ಯಡಿಯೂರಪ್ಪ ಅವರು ಬಿಜೆಪಿಗೆ ಬಂದ ತಕ್ಷಣ ಟಿಪ್ಪು ಟೋಪಿ ತೆಗೆದು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ನಾಟಕವಾಡುತ್ತಿದ್ದಾರೆ ಎಂದು ಟೀಕಿಸಿದ ಮಧು ಬಂಗಾರಪ್ಪ, ಸಾಲಮನ್ನಾ ವಿಚಾರದಲ್ಲಿ ಇತರ ಪಕ್ಷಗಳನ್ನು ದೂರುವ ಯಡಿಯೂರಪ್ಪ ಅವರು ತಾವು ಮುಖ್ಯಮಂತ್ರಿಯಾಗಿ ದ್ದಾಗ ಏನು ಮಾಡಿದರು ಎಂಬದನ್ನು ಮೊದಲು ಅರಿತುಕೊಳ್ಳಲಿ ಎಂದರು. ಇನ್ನು ರಾಜ್ಯದ ರೈತರ ಅಲ್ಪಮೊತ್ತದ ಸಾಲ ಮನ್ನಾ ಮಾಡಿದ್ದೇವೆ ಎಂದು ಬೀಗುವ
(ಮೊದಲ ಪುಟದಿಂದ) ಸಿಎಂ ಸಿದ್ದರಾಮಯ್ಯ ಅವರು ಸಾಲಮನ್ನಾ ಎಷ್ಟರಮಟ್ಟಿಗೆ ಫಲಕಂಡಿದೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಮಧು ಬಂಗಾರಪ್ಪ ಹೇಳಿದರು.
ಮಾಜಿ ಸಚಿವ, ಜೆಡಿಎಸ್ ಅಭ್ಯರ್ಥಿ ಜೀವಿಜಯ ಅವರು ಮಾತನಾಡಿ, ಕೊಡಗಿನ ಜ್ವಲಂತ ಸಮಸ್ಯೆಗಳ ಬಗ್ಗೆ ತನಗೆ ಅರಿವಿದ್ದು, ಜನತೆ ಆಶೀರ್ವದಿಸಿದರೆ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಲಿದ್ದೇನೆ ಎಂದರು. ಪ್ರಸ್ತುತ ಧರ್ಮದ ಆಧಾರದಲ್ಲಿ ರಾಜಕೀಯ ಭವಿಷ್ಯ ರೂಪಿಸಿಕೊಳ್ಳುವ ಪ್ರಯತ್ನಗಳು ರಾಷ್ಟ್ರೀಯ ಪಕ್ಷಗಳ ನಾಯಕರಿಂದ ನಡೆಯುತ್ತಿದೆ ಎಂದು ಆರೋಪಿಸಿದ ಅವರು ಬಿಜೆಪಿ -ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ಕೊಡಗಿಗೆ ಬಿಡುಗಡೆಯಾಗಿದೆ ಎನ್ನಲಾದ ವಿಶೇಷ ಪ್ಯಾಕೇಜ್‍ನ ‘ಪ್ಯಾಕೆಟ್’ ಯಾರ ‘ಪಾಕೆಟ್’ಗೆ ಸೇರಿದೆ ಎಂಬದು ಗೊತ್ತಾಗುತ್ತಿಲ್ಲ ಎಂದು ಲೇವಡಿಯಾಡಿದರು. ಪ್ಯಾಕೆಜ್‍ಗಳು ಮೇಲಿಂದ ಮೇಲೆ ಬಿಡುಗಡೆಯಾಗಿವೆ. ಆದರೆ ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿನ ಸಮಸ್ಯೆಗಳು ಮಾತ್ರ ಪರಿಹಾರವಾಗಿಲ್ಲ ಎಂದರು. ಯಡಿಯೂರಪ್ಪ ಬಗ್ಗೆ ನಾನು ಮಾತನಾಡಲಾರೆ, ಏಕೆಂದರೆ ಶೋಭಾ ಕರಂದ್ಲಾಜೆ ಹರಿಹಾಯುತ್ತಾರೆ. ಅದೇ ರೀತಿ ಸಿದ್ದರಾಮಯ್ಯ ಬಗ್ಗೆಯೂ ಮಾತನಾಡಲಾರೆ ಏಕೆಂದರೆ ಸಚಿವ ಆಂಜನೇಯ ಕೆರಳುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದ ಜೀವಿಜಯ ಜೆಡಿಎಸ್ ಸದಾ ಜನಪರವಾದ ಪಕ್ಷ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ಕೊಡಗಿನಲ್ಲಿ ಕಾಡಾನೆಗಳಿಂದ ಮೂವತ್ತಕ್ಕೂ ಅಧಿಕ ಮಂದಿ ಸತ್ತರೂ ಅರಣ್ಯ ಸಚಿವರು ತಲೆಕೆಡಿಸಿಕೊಳ್ಳಲಿಲ್ಲ. ಶಾಸಕರು ಸಂಸದರು ಎಚ್ಚೆತ್ತುಕೊಳ್ಳಲಿಲ್ಲ. ರೈತರು ಆತ್ಮಹತ್ಯೆಗೆ ಶರಣಾದರೂ ಅವರ ಸಾವಿಗೆ ನ್ಯಾಯ ಒದಗಿಸುವ ಕೆಲಸವನ್ನು ಯಾವ ಸರ್ಕಾರಗಳು ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಜಿಲ್ಲೆಯ ಸುಭೀಕ್ಷೆಗಾಗಿ ಜೆಡಿಎಸ್ ಅನಿವಾರ್ಯ ಎಂದು ಹೇಳಿದರು.
ಯುವ ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ಚಂದ್ರಶೇಖರ್ ಹಾಗೂ ವಿಭಾಗೀಯ ಕಾರ್ಯದರ್ಶಿ ನರಸಿಂಹÀ ಮೂರ್ತಿ ಮಾತನಾಡಿ, ಯುವಕರಿಗೆ ಉದ್ಯೋಗ, ರೈತರಿಗೆ ಬೆಂಬಲ, ಜನತೆಗೆ ಅಗತ್ಯ ಸೌಲಭ್ಯ ಸಿಗಬೇಕಾದರೆ ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಅವಶ್ಯಕತೆ ಹೆಚ್ಚಿದೆ ಎಂದರು.
ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಸಿ.ಎಲ್. ವಿಶ್ವ ಮಾತನಾಡಿ, ರಾಷ್ಟ್ರೀಯ ಪಕ್ಷಗಳು ಚುನಾವಣೆ ವೇಳೆ ಯುವ ಜನತೆಯ ಪರ ಎಂದು ಬಡಾಯಿಕೊಚ್ಚುತ್ತಾ ಕೊನೆಗೆ ತಮ್ಮ ಕಾರ್ಯ ಮುಗಿದ ಬಳಿಕ ನಿರ್ಲಕ್ಷಿಸುವ ಕೆಲಸ ಮಾಡುತ್ತಾ ಬಂದಿವೆ. ಆದರೆ ಜೆಡಿಎಸ್ ಯುವ ಜನತೆಗೆ ಸದಾ ಪ್ರೋತ್ಸಾಹ ನೀಡುತ್ತಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಜಿ.ಪಂ. ಸದಸ್ಯ ಪುಟ್ಟರಾಜು ಜೆಡಿಎಸ್ ಪದಾಧಿಕಾರಿಗಳಾದ ಬಿ.ವೈ. ರಾಜೇಶ್, ಮತೀನ್, ರವಿಕಿರಣ್, ಜಗದೀಪ್, ಸತೀಶ್ ಜೋಯಪ್ಪ ಮತ್ತಿತರ ಪ್ರಮುಖರು ಇದ್ದರು. ಈ ಸಂದರ್ಭ ಕಾಂಗ್ರೆಸ್ ಹಾಗೂ ಬಿಜೆಪಿ ತೊರೆದು ಹಲವು ಮಂದಿ ಜೆಡಿಎಸ್ ಸೇರ್ಪಡೆಗೊಂಡರು. ಸಮಾವೇಶಕ್ಕೂ ಕುಶಾಲನಗರದಿಂದ ಮಡಿಕೇರಿವರೆಗೆ ಬೈಕ್ ಜಾಥಾ ಹಾಗೂ ಮಡಿಕೇರಿ ನಗರದಲ್ಲಿ ಮೆರವಣಿಗೆ ನಡೆಯಿತು.
ಕುಶಾಲನಗರ
ಯುವ ಜನತಾದಳ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆಗಮಿಸಿದ ರಾಜ್ಯ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಅವರನ್ನು ಕುಶಾಲನಗರದ ಕೊಪ್ಪ ಗೇಟ್ ಬಳಿ ಕಾರ್ಯಕರ್ತರು ಬರಮಾಡಿ ಕೊಂಡರು. ನೂರಾರು ಬೈಕ್‍ಗಳಲ್ಲಿ ತೆರಳಿದ ಕಾರ್ಯಕರ್ತರು ರಾಜ್ಯಾಧ್ಯಕ್ಷ ರನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದರು.