ಗೋಣಿಕೊಪ್ಪಲು: ರಾಜ್ಯ ಸರ್ಕಾರ ಸುಮಾರು 650 ಕನ್ನಡ ಶಾಲೆಯನ್ನು ತೆರೆಯಲು ಮುಂದಾಗಿದ್ದು, ಇದೀಗ ರಾಜ್ಯದಲ್ಲಿ ಮುಚ್ಚುವ ಹಂತದಲ್ಲಿರುವ ಶಾಲೆಯ ರಕ್ಷಣೆಗೆ ಮುಂದಾಗಲಿ ಎಂದು ಹಾತೂರು ಪ್ರೌಢಶಾಲಾ ಅಧ್ಯಕ್ಷರಾಗಿ ಸುದೀರ್ಘ 35 ವರ್ಷ ಸೇವೆ ಸಲ್ಲಿಸಿರುವ ದೊಡ್ಡಮನೆ ಸುಬ್ರಮಣಿ ಕ್ಷೇತ್ರ ಶಿಕ್ಷಣ ಇಲಾಖೆಗೆ ಮನವಿ ಮಾಡಿದರು.

ಹಾತೂರು ಅನುದಾನಿತ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಸ್ಥಳೀಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇತ್ತೀಚೆಗೆ ವಿದ್ಯಾರ್ಥಿಗಳ ದಾಖಲಾತಿ ಕೊರತೆ ಕಂಡು ಬಂದಿದ್ದು, ಈ ಶಾಲೆಯನ್ನು ಉಳಿಸಲು ಮನವಿ ಮಾಡಿದರು.

ಹಾತೂರು ಪ್ರೌಢಶಾಲಾ ವತಿಯಿಂದ ಈ ಹಿಂದೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂಜನರಲ್ ತಿಮ್ಮಯ್ಯ ಅವರನ್ನೂ ಸನ್ಮಾನಿಸಲಾಗಿತ್ತು. 1922 ರಲ್ಲಿ ಹಾತೂರು ಸರ್ಕಾರಿ ಪ್ರಾಥಮಿಕ ಶಾಲೆಯು ದಾನಿಗಳ ಸಹಕಾರದೊಂದಿಗೆ ಆರಂಭಗೊಂಡಿತ್ತು. ಇಲ್ಲಿ ಹಲವು ಕೌಟುಂಬಿಕ ಕ್ರೀಡಾಕೂಟಗಳು, ಗ್ರಾಮೀಣ ಕ್ರೀಡಾಕೂಟಗಳು ನಿರಂತರ ನಡೆಯುತ್ತಿದ್ದು, ಮಿನಿ ಸ್ಟೇಡಿಯಂ ನಿರ್ಮಾಣದ ಅಗತ್ಯವಿದೆ. ಹಾತೂರು ಗ್ರಾಮದ ಯುವ ಜನಾಂಗ ಶಾಲೆಯನ್ನು ಉಳಿಸುವ ಸಲುವಾಗಿ ವಸತಿ ಶಾಲೆಯಾಗಿ ರೂಪುಗೊಳಿಸಲು ಹಾಗೂ ಶಾಲೆಗೆ ಅಧಿಕವಾಗಿ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಲು ಸಹಕರಿಸಲು ಮನವಿ ಮಾಡಿದರು.