ಮಡಿಕೇರಿ, ಜ. 28: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗದ ವಿಸ್ತರಣಾ ಶಿಕ್ಷಣ ಘಟಕ ಮಡಿಕೇರಿಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಸಂರಕ್ಷಿತ ತರಕಾರಿ ಬೆಳೆ ಕ್ಷೇತ್ರೋತ್ಸವವನ್ನು ಭಾರತೀಯ ಸಾಂಬಾರು ಬೆಳೆ ಸಂಶೋಧನಾ ಸಂಸ್ಥೆ ಅಪ್ಪಂಗಳದ ಮುಖ್ಯ ವಿಜ್ಞಾನಿ ಡಾ. ಅಂಕೆಗೌಡ ಉದ್ಘಾಟಿಸಿದರು.

ಉದ್ಘಾಟನಾ ಭಾಷಣದಲ್ಲಿ ತರಕಾರಿ ಬೆಳೆಗಳ ಮಹತ್ವ ಹಾಗೂ ಲಭ್ಯವಿರುವ ಕಡಿಮೆ ಸ್ಥಳದಲ್ಲಿಯೇ ಅವಶ್ಯಕ ತರಕಾರಿಗಳನ್ನು ಬೆಳೆದು ಕೊಳ್ಳುವ ಬಗ್ಗೆ ತಿಳಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರಣ್ಯ ಮಹಾವಿದ್ಯಾಲಯದ ಪ್ರೊ. ಡಾ. ಜಿ.ಎಂ. ದೇವಗಿರಿ ಮುಖ್ಯ ಬೆಳೆಗಳ ಜೊತೆ ತರಕಾರಿ ಬೆಳೆಗಳನ್ನು ಬೆಳೆದುಕೊಳ್ಳುವದು ರೈತರ ಆದಾಯವನ್ನು ಹೆಚ್ಚಿಸಿಕೊಳ್ಳಲು ಒಂದು ಪ್ರಮುಖ ದಾರಿ ಎಂದರು.

ತೋಟಗಾರಿಕೆ ತಜ್ಞ ಎನ್.ಎಂ. ಪೂಣಚ್ಚ ಮಾತನಾಡಿ, ಕೊಡಗಿನಲ್ಲಿ ಬೆಳೆಯಬಹುದಾದ ತರಕಾರಿಗಳನ್ನು ವಿಸ್ತರಣಾ ಘಟಕದ ಆವರಣದಲ್ಲಿ ಬೆಳೆದು ರೈತರಿಗೆ ಮಾದರಿ ಪ್ರಾತ್ಯಕ್ಷಿತೆಗಳನ್ನು ಮಾಡುವ ಉದ್ದೇಶ ಈಗ ಫಲ ಕೊಡುತ್ತಿವೆ ಎಂದು ತಿಳಿಸಿದರು.

ಕೃಷಿ ಅಧಿಕಾರಿ ಗಿರೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಆರ್.ಎನ್. ಕೆಂಚರೆಡ್ಡಿ ಮಾಹಿತಿ ನೀಡಿದರು. ತಾಂತ್ರಿಕ ಸಮಾವೇಶದಲ್ಲಿ ಕೆ.ವಿ.ಕೆ. ಗೋಣಿಕೊಪ್ಪದ ವಿಜ್ಞಾನಿ ಡಾ. ವಿರೇಂದ್ರಕುಮಾರ್, ಶಿಕ್ಷಣ ಘಟಕದ ಪ್ರವೀಣ್ ಯಡಹಳ್ಳಿ ಮಾಹಿತಿ ನೀಡಿದರು. ರೈತರು ಅಲ್ಲಿ ಬೆಳೆದಿರುವ ಬ್ರೊಕೊಲಿ, ಬಣ್ಣದ ದೊಣ್ಣೆ ಮೆಣಸಿನಕಾಯಿ, ಕೆಂಪು ಎಲೆಕೋಸು, ಇಂಗ್ಲೀಷ್ ಸೌತೆ ಇತ್ಯಾದಿಗಳನ್ನು ವೀಕ್ಷಿಸಿದರು.