ಭಾಗಮಂಡಲ, ಜ. 28: 25ನೇ ವರ್ಷದ ನೆನಪಿಗಾಗಿ ಈ ವರ್ಷ ಕೆದಂಬಾಡಿ ಕ್ರಿಕೆಟ್ ಉತ್ಸವದ ಚರಿತ್ರೆಯನ್ನು ಬಿಡುಗಡೆ ಮಾಡುವದಾಗಿ ಕೆದಂಬಾಡಿ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಜಯಪ್ರಕಾಶ್ ಹೇಳಿದರು.
ಕೆದಂಬಾಡಿ ಐನ್‍ಮನೆಯಲ್ಲಿ ನಡೆದ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಕ್ಕೇರಿ ರಾಜಮನೆತನದ ಕುಮಾರಸ್ವಾಮಿ ಮೂಲಪುರುಷರು ಹಾಗೂ ಗೌಡರ ಪದ್ಧತಿಯಲ್ಲಿ ಬುಡು ಬುದ್ದಿವಂತರ ಮಂದಿಗಳಿದ್ದರು. ಅಲ್ಲದೆ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ಕೆದಂಬಾಡಿ ರಾಮೇಗೌಡ ನಡೆದಾಡಿದ ಭೂಮಿಯಲ್ಲಿ ಕೆದಂಬಾಡಿ ಕುಟುಂಬದ ಇತಿಹಾಸ ಹೊಂದಿದೆ. ಕೆದಂಬಾಡಿ ಕ್ರಿಕೆಟ್ ಈ ಬಾರಿ ಮಾರ್ಚ್ 27 ರಿಂದ ಆರಂಭಗೊಂಡು ಏಪ್ರಿಲ್ 7ಕ್ಕೆ ಮುಕ್ತಾಯಗೊಳ್ಳಲಿದೆ. ಕೆದಂಬಾಡಿ ಕ್ರಿಕೆಟ್‍ನ ಅಂತಿಮ ಪಂದ್ಯದಲ್ಲಿ ಕ್ರಿಕೆಟ್ ಉತ್ಸವದ ಚರಿತ್ರೆ ಬಿಡುಗಡೆ ಮಾಡಲಾಗುವದೆಂದರು.
ಕ್ಲಬ್‍ನ ಸಂಚಾಲಕ ಸುರೇಶ್ ಮಾತನಾಡಿ, ಈ ಬಾರಿ ಸುಮಾರು 250 ತಂಡಗಳು ಭಾಗವಹಿಸುವ ನಿರೀಕ್ಷೆ ಇದ್ದು ದಕ್ಷಿಣ ಕನ್ನಡ ಹಾಗೂ ಕೊಡಗಿನ ಗೌಡ ಕುಟುಂಬಗಳು ಭಾಗವಹಿಸಲಿದ್ದು ಸ್ಥಳಾವಕಾಶದ ಸಾಧಕ ಬಾಧಕ ಗಮನದಲ್ಲಿಟ್ಟು ಮೊದಲು ನೋಂದಾಯಿಸಿದ ತಂಡಗಳಿಗೆ ಆದ್ಯತೆ ನೀಡಲಾಗುವದು. ಈ ಬಾರಿ ಉಚಿತ ಊಟದ ವ್ಯವಸ್ಥೆಯನ್ನು ಕುಟುಂಬದ ವತಿಯಿಂದ ಕೈಗೊಳ್ಳಲಾಗಿದೆ ಎಂದರು. ಸದಸ್ಯ ಪೃಥ್ವಿರಾಜ್ ಮಾತನಾಡಿ, ಭಾಗವಹಿಸಿದ ಮನೆತನದ ಪಟ್ಟೇದಾರರಿಗೆ 25ನೇ ವರ್ಷದ ನೆನಪಿನ ಕಾಣಿಕೆಯನ್ನು ನೀಡಲಾಗುವದು.
ರಜತ ಕಾಣಿಕೆ ಆಕರ್ಷಕ ವಾಗಿದ್ದು ಟ್ರೋಫಿಯು ಆಕರ್ಷಕ ವಾಗಿದ್ದು ಉತ್ತಮ ಸಾಧನೆಗೈದ ಆಟಗಾರರಿಗೆ ಪ್ರತ್ಯೇಕ ಬಹುಮಾನ ನೀಡಲಾಗುವದು. ನೆರೆಮನೆಯ ದೊಡ್ಡೇರ ದೀಪಕ್ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ.
ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುವದರೊಂದಿಗೆ ಪ್ರತಿಭಾ ಪ್ರದರ್ಶನ ನಡೆಯಲಿದ್ದು ಗಣ್ಯರನ್ನು ಸನ್ಮಾನಿಸುವ ಕಾರ್ಯಕ್ರಮ ಜರುಗಲಿದೆ. ತಂಡಗಳ ಹೆಸರು ನೋಂದಾಯಿಸಲು ಮಾರ್ಚ್ 12 ಕೊನೆಯ ದಿನ ಎಂದರು.
ಗೋಷ್ಠಿಯಲ್ಲಿ ಕೆದಂಬಾಡಿ ಮನೆತನದ ಬೆಳ್ಯಪ್ಪ, ಪ್ರಸನ್ನ ಕುಮಾರ್, ಸುರೇಂದ್ರ, ತಿಮ್ಮಯ್ಯ ಇಂಜಿನಿಯರ್ ರಾಜು, ವಿಶ್ವನಾಥ್, ಪಾರ್ವತಿ, ನಂದಕುಮಾರ್, ದಿಲ್ಲಿ, ಹಾಗೂ ಮನೆತನದ ಮಹಿಳೆಯರು ಕುಟುಂಬಸ್ಥರು ಉಪಸ್ಥಿತರಿದ್ದರು.
ಹೆಸರು ನೋಂದಾಯಿಸುವವರು 9449143169, 9008305138 ಇವರಲ್ಲಿ ನೋಂದಾಯಿಸ ಬಹುದಾಗಿದೆ.