ಕುಶಾಲನಗರ, ಜ. 28: ಕೂಡಿಗೆ ಸೈನಿಕ ಶಾಲೆಯ 10ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ. ಮಹೇಶ್ ಚಂದ್ರಗುರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಾಲೆಯ ಅವಿಸ್ಮರಣೀಯ ಸಾಧನೆ ಯನ್ನು ಶ್ಲಾಘಿಸಿದರು. ಯುವಪೀಳಿಗೆ ವಿವೇಕಾನಂದ, ಬುದ್ಧ, ಬಸವ, ಅಂಬೇಡ್ಕರ್‍ರ ತತ್ವಗಳನ್ನು ಮೈಗೂಡಿಸಿ ಕೊಂಡು ಆದರ್ಶ ನಾಗರೀಕರಾಗಿ ಬಾಳಬೇಕೆಂದು ಕಿವಿಮಾತು ಹೇಳಿದರು. ಈ ಮಹಾನ್ ವ್ಯಕ್ತಿಗಳ ತತ್ವಗಳು ಆಧುನಿಕ ನಾಗರೀಕರ ಬದುಕಿಗೆ ದಾರಿದೀಪವಾಗಿದೆ ಎಂದು ತಿಳಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಆರ್.ಆರ್. ಲಾಲ್ ಶಾಲೆಯ 2017-18ನೇ ಶೈಕ್ಷಣಿಕ ಸಾಲಿನ ವಾರ್ಷಿಕ ವರದಿಯನ್ನು ವಾಚಿಸಿದರು.

ಶಾಲೆಯಲ್ಲಿ ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ಸಮರ್ಥ ವಾಗಿ ನಾಯಕತ್ವ ಗುಣಗಳನ್ನು ಪ್ರದರ್ಶಿಸಿದ ಶಾಲೆಯ ನಾಯಕ, ಉಪನಾಯಕ, ವಿವಿಧ ವಿಭಾಗಗಳ ನಾಯಕರುಗಳಿಗೆ ಮತ್ತು ಎಲ್ಲಾ ನಿಲಯಗಳ ನಾಯಕರುಗಳಿಗೆ ಪ್ರಶಸ್ತಿಪತ್ರ ಮತ್ತು ಪಾರಿತೋಷಕವನ್ನು ನೀಡಿ ಗೌರವಿಸಲಾಯಿತು. 2017-18ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆಗೈದ ಸುಬ್ರತೋ ನಿಲಯಕ್ಕೆ ‘ಕಾಕ್ ಹೌಸ್’ ಪಾರಿತೋಷಕವನ್ನು ಹಾಗೂ ಅಂತರ ನಿಲಯ ಎನ್.ಸಿ.ಸಿ. ಡ್ರಿಲ್ ಸ್ಪರ್ಧೆಯಲ್ಲಿ ವಿಜೇತರಾದ ಕಾರ್ಯಪ್ಪ ನಿಲಯಕ್ಕೆ ವಿಶೇಷ ಪಾರಿತೋಷಕವನ್ನು ಪ್ರದಾನ ಮಾಡಲಾಯಿತು.

ವಿದ್ಯಾರ್ಥಿಗಳು ದೇಶ ಭಕ್ತಿಯನ್ನು ಬಿಂಬಿಸುವ ವಿವಿಧ ಬಗೆಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಶಾಲಾ ಶಿಕ್ಷಕಿ ಶ್ರೀಲೇಖಾ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಡಿ. ಮ್ಯಾಥ್ಯು, ಹಿರಿಯ ಶಿಕ್ಷಕ ಎಸ್. ಸೂರ್ಯ ನಾರಾಯಣ, ವಿದ್ಯಾರ್ಥಿಗಳು, ಪೋಷಕರು, ಬೋಧಕ, ಬೋಧಕೇತರ ವರ್ಗದವರು ಮತ್ತು ಅವರ ಕುಟುಂಬ ವರ್ಗದವರು ಪಾಲ್ಗೊಂಡಿದ್ದರು.

ಶಿಕ್ಷಕ ಪ್ರಸಾದ್ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಕೆಡೆಟ್ ಮೇಘನಾ ಸ್ವಾಗತ ನೃತ್ಯವನ್ನು ನಡೆಸಿಕೊಟ್ಟರು. ಕೆಡೆಟ್ ಜೀತ್ ಮತ್ತು ಪವನ್ ತಿಮ್ಮಯ್ಯ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.