ಮಡಿಕೇರಿ ಜ.28 : ಕೊಡಗು ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸೂಚಿಸುವಲ್ಲಿ ಇಬ್ಬರು ಶಾಸಕರು ಸಫಲರಾಗಿಲ್ಲ ಎಂದು ಯುವ ಜಾತ್ಯತೀತ ಜನತಾದಳದ ರಾಜ್ಯ ಕಾರ್ಯಾಧ್ಯಕ್ಷ ಬಿ.ಹೆಚ್. ಚಂದ್ರಶೇಖರ್ ಆರೋಪಿಸಿದ್ದಾರೆ.ಕಾವೇರಿಯ ಉಗಮ ಸ್ಥಾನ ಕೊಡಗು ಜಿಲ್ಲೆಯಲ್ಲೇ ಕುಡಿಯುವ ನೀರಿನ ಕೊರತೆ ಮಿತಿ ಮೀರಿದೆ, ಬೇಸಿಗೆಯಲ್ಲಿ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಇಬ್ಬರು ಶಾಸಕರು ಜಿಲ್ಲೆಗೆ ಶಾಶ್ವತವಾದ ಬೃಹತ್ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೆ ತಂದಿಲ್ಲ ಎಂದರು. ಮೃತರ ಮನೆಗಳಿಗೆ ಶಾಸಕರುಗಳು ಭೇಟಿ ನೀಡಿ ಸಾಂತ್ವನ ಹೇಳುತ್ತಿಲ್ಲ, ಈ ಸಮಸ್ಯೆಗಳ ವಿರುದ್ದ ವಿಧಾನಸೌಧದಲ್ಲಿ ಧ್ವನಿ ಎತ್ತುತ್ತಿಲ್ಲವೆಂದು ಚಂದ್ರಶೇಖರ್ ಆರೋಪಿಸಿದರು. ಜೆಡಿಎಸ್ ಅಧಿಕಾರಕ್ಕೆ ಬಂದರೆ ಜಿಲ್ಲೆಗೆ ಶಾಶ್ವತವಾದ ಬೃಹತ್ ಕುಡಿಯುವ ನೀರಿನ ಯೋಜನೆ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಆದ್ಯತೆ ನೀಡುವದಾಗಿ ಚಂದ್ರಶೇಖರ್ ಭರವಸೆ ನೀಡಿದರು.

ಯುವ ಜಾತ್ಯತೀತ ಜನತಾದಳದ ಜಿಲ್ಲಾ ಸಮಾವೇಶ ನಗರದ ಗೌಡ ಸಮಾಜದಲ್ಲಿ ಜ.29 ರಂದು (ಇಂದು) ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿರುವ ಯುವ ಜೆಡಿಎಸ್‍ನ ರಾಜ್ಯಾಧ್ಯಕ್ಷರಾದ ಮಧುಬಂಗಾರಪ್ಪ

(ಮೊದಲ ಪುಟದಿಂದ) ಅವರನ್ನು ಕೊಪ್ಪ ಗೇಟ್ ಬಳಿ ಬೆಳಗ್ಗೆ 10 ಗಂಟೆಗೆ ಅದ್ದೂರಿಯಾಗಿ ಬರ ಮಾಡಿಕೊಳ್ಳಲಾಗುವದು. ಕುಶಾಲನಗರದಿಂದ ಮಡಿಕೇರಿಯವರೆಗೆ ಬೃಹತ್ ಬೈಕ್ ರ್ಯಾಲಿ ನಡೆಯಲಿದ್ದು, 10.30 ಕ್ಕೆ ನಗರದ ಸುದರ್ಶನ ಅತಿಥಿ ಗೃಹದಲ್ಲಿ ಪತ್ರಕರ್ತರೊಂದಿಗೆ ಮಧುಬಂಗಾರಪ್ಪ ಸಂವಾದ ನಡೆಸಲಿದ್ದಾರೆ. ನಂತರ ಗೌಡ ಸಮಾಜದಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಚಂದ್ರಶೇಖರ್ ಮಾಹಿತಿ ನೀಡಿದರು.

ಪಕ್ಷದ ನಗರಾಧ್ಯಕ್ಷ ಬಿ.ವೈ. ರಾಜೇಶ್ ಯಲ್ಲಪ್ಪ ಯುವ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸಿ.ಎಲ್.ವಿಶ್ವ, ಪ್ರಧಾನ ಕಾರ್ಯದರ್ಶಿ ಜಾಶಿರ್, ರಾಜ್ಯದ ವಿಭಾಗೀಯ ಕಾರ್ಯದರ್ಶಿ ನರಸಿಂಹ ಮೂರ್ತಿ ಹಾಗೂ ಸಂಘಟನಾ ಕಾರ್ಯದರ್ಶಿ ಅಶ್ವಥ್ ಉಪಸ್ಥಿತರಿದ್ದರು.