ಮಡಿಕೇರಿ, ಜ. 28: ಮಕ್ಕಳಿಗೆ ಆಶ್ರಯವಾಗಬೇಕಾದ ಅಂಗನವಾಡಿ ಕೇಂದ್ರವೊಂದು ಪ್ರವಾಸಿಗರಿಗೆ ಉಳಿದುಕೊಳ್ಳಲು ಹೋಂಸ್ಟೇಯಾಗಿ ದುರ್ಬಳಕೆಯಾದ ವಿಪರ್ಯಾಸಕರ ಘಟನೆಯೊಂದು ವರದಿಯಾಗಿದೆ.
ನಿನ್ನೆ ಶನಿವಾರದಂದು ಎಂದಿನಂತೆ ವಾರಾಂತ್ಯದಲ್ಲಿ ಜಿಲ್ಲೆಯಲ್ಲಿ ಪ್ರವಾಸಿಗರ ಒತ್ತಡ ಕಂಡು ಬಂದಿತು. ಬೆಂಗಳೂರಿನ ಅಲಸೂರುವಿನಿಂದ 19 ಮಂದಿ ಪ್ರವಾಸಿಗರು ಜಿಲ್ಲೆಗೆ ಪ್ರವಾಸಕ್ಕೆ ಬಂದಿದ್ದು, ಹೋಂಸ್ಟೇಗಳು ಲಭ್ಯವಿಲ್ಲದನ್ನು ಅರಿತ ಇವರುಗಳು ಇಲ್ಲಿಗೆ ಸನಿಹದ ಉಡೋತ್‍ಮೊಟ್ಟೆ ಯಲ್ಲಿ ಉಳಿಯಲು ಆಶ್ರಯಕ್ಕಾಗಿ ಪ್ರಯತ್ನಿಸಿದರು. 14 ಮಂದಿ ಮಹಿಳೆಯರು, ಓರ್ವ ಪುರುಷ ನಾಲ್ವರು ಮಕ್ಕಳಿದ್ದ ಈ ತಂಡ ಊರಿನವರ ಬಳಿ ಬೇಡಿಕೆಯೊಡ್ಡಿ ತಡಕಾಡಿದಾಗ ಅವರ ಪ್ರಯತ್ನ ನಿಷ್ಫÀ್ಪಲಗೊಂಡಿತು. ಬಳಿಕ ಅಲ್ಲಿನ ಕ್ಯಾಂಟಿನ್‍ವೊಂದರಲ್ಲಿ ಭೋಜನ ಮಾಡಿದ ಈ ತಂಡ ಅವರ ಬಳಿ ಆಶ್ರಯದ ಬೇಡಿಕೆ ಮುಂದೊಡ್ಡಿದಾಗ ಅಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಸಿಗಬಹುದೆನ್ನುವ ಸಲಹೆ ಕೇಳಿ ಬಂದಿತು.
ಸೀದಾ ಅಂಗನವಾಡಿಗೆ ತೆರಳಿದಾಗ ಅಲ್ಲಿನ ಕಾರ್ಯಕರ್ತೆ ಪಾರ್ವತಿ ಎಂಬವರು ಈ ಪ್ರವಾಸಿಗರನ್ನು ಆದರದಿಂದ ಬರಮಾಡಿಕೊಂಡು ಉಳಿಯಲು ಅವಕಾಶ ಕಲ್ಪಿಸಿದರು. ಈ ಕುರಿತು ಊರಿನ ಕೆಲವು ಯುವಕರಿಗೆ ಮಾಹಿತಿ ಲಭ್ಯವಾದಾಗ ಆಕ್ರೋಶಗೊಂಡ ಯುವಕರು ಅಂಗನವಾಡಿಗೆ ಮುತ್ತಿಗೆ ಹಾಕಿದರು. ಊರಿನ ದಾನಿಗಳು ಮಕ್ಕಳಿಗಾಗಿ ನೀಡಿದ ಹಾಸಿಗೆ ಹಾಗೂ ಪೀಠೋಪಕರಣಗಳನ್ನು ಯಾವದೋ ಆಮಿಷಕ್ಕಾಗಿ ಪ್ರವಾಸಿಗರಿಗೆ ನೀಡಿ ದುರ್ಬಳಕೆ ಮಾಡಿಕೊಂಡ ಬಗ್ಗೆ ಈ ಯುವ ಸಮೂಹ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
ಅಂಗನವಾಡಿ ಕಾರ್ಯಕರ್ತೆ ಯನ್ನು ಜನ ತೀವ್ರ ತರಾಟೆಗೆ ತೆಗೆದುಕೊಂಡರು. ಈ ಬೆಳವಣಿಗೆಗಳನ್ನು ಗಮನಿಸಿದ 19 ಮಂದಿ ಪ್ರವಾಸಿಗರು ಸುಮಾರು ಮಧ್ಯರಾತ್ರಿ 12 ಗಂಟೆ ವೇಳೆಗೆ ಅಂಗನವಾಡಿ ಕೇಂದ್ರದಿಂದ ಹೊರಬಂದು ಕಾಲ್ಕಿತ್ತರು. ಜಿಲ್ಲೆಯಲ್ಲಿ ಇಂತಹ ಅವಕಾಶವಾದಿತ್ವ ಪ್ರಕರಣ ಪ್ರಥಮ ಬಾರಿಗೆ ನಡೆದಿದ್ದು, ಊರಿನವರ ಅಸಮಾಧಾನಕ್ಕೆ ಕಾರಣವಾಗಿದೆ.