ಸೋಮವಾರಪೇಟೆ, ಜ. 27: ಗ್ರಾಮಾಂತರ ಪ್ರದೇಶಗಳಲ್ಲಿನ ವಿದ್ಯಾಸಂಸ್ಥೆಗಳನ್ನು ಉಳಿಸಿ, ಬೆಳೆಸುವಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಅಪಾರವಾಗಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ ಹೇಳಿದರು.

ಸಮೀಪದ ನೇರುಗಳಲೆ ಸರಕಾರಿ ಮಾದರಿ ಪ್ರಾಥಮಿಕ ಹಾಗೂ ಸರ್ಕಾರಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಹಾಗೂ ಪ್ರೌಢಶಾಲೆಯ ದಶ ಮಾನೋತ್ಸವ ಸಮಾರಂಭದಲ್ಲಿ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಹತ್ತು ವರ್ಷಗಳ ಹಿಂದೆ ಆರಂಭವಾದ ಪ್ರೌಢಶಾಲೆಯನ್ನು ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಸ್ಥರ ಸಹಕಾರದಿಂದ ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗಿದೆ. ಖಾಸಗಿ ಶಾಲೆಗಳ ಭರಾಟೆಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸುವದು ಕಷ್ಟಸಾಧ್ಯ. ಹೀಗಿದ್ದರೂ ಗ್ರಾಮಸ್ಥರ ಹಾಗೂ ದಾನಿಗಳ ನೆರವಿನಿಂದ ಶಾಲೆಯು ದಶ ಮಾನೋತ್ಸವ ಸಂಭ್ರಮದಲ್ಲಿ ರುವದು ಹೆಮ್ಮೆಯ ವಿಚಾರವಾಗಿದೆ ಎಂದರು. ಈ ಸಂದರ್ಭ ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಹೆಚ್. ತಿಮ್ಮಯ್ಯ, ಉಪಾಧ್ಯಕ್ಷ ದಿವಾಕರ್, ಪ್ರಾಥಮಿಕ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ರಾಧಾಕೃಷ್ಣ ರೈ, ಪ್ರೌಢಶಾಲೆಯ ಅಧ್ಯಕ್ಷ ಸೋಮಶೇಖರ್, ನೇರುಗಳಲೆ ಗ್ರಾ.ಪಂ. ಮಾಜಿ ಅಧ್ಯಕ್ಷ ಲೋಕಾನಂದ, ಮುಖ್ಯ ಶಿಕ್ಷಕರಾದ ಲೀಲಾವತಿ, ತಂಗಮ್ಮ ಮತ್ತಿತರರು ಇದ್ದರು.

ಈ ಸಂದರ್ಭ ನೇರುಗಳಲೆ ಗ್ರಾಮ ಪಂಚಾಯಿತಿ ಮಟ್ಟದ ಕಬಡ್ಡಿ ಪಂದ್ಯಾಟ, ದೂರದ ಓಟ ಸ್ಪರ್ಧೆ, ಅಂಗನವಾಡಿ ಮಕ್ಕಳಿಗೆ 50 ಮೀ. ಓಟದ ಸ್ಪರ್ಧೆ, ಸಾರ್ವಜನಿಕರಿಗೆ ರಂಗೋಲಿ, ಚಿತ್ರಕಲೆ, ವಾಲಿಬಾಲ್, ಥ್ರೋಬಾಲ್, ಕ್ರಿಕೆಟ್, ಷಾಟ್‍ಪುಟ್, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸ ಲಾಗಿತ್ತು. ತೀರ್ಪುಗಾರರಾಗಿ ದೈಹಿಕ ಶಿಕ್ಷಕಿ ಚಂದ್ರಾವತಿ, ಶಿಕ್ಷಕ ರತ್ನ ಕುಮಾರ್ ಕಾರ್ಯನಿರ್ವಹಿಸಿದರು.

ದಶಮಾನೋತ್ಸವದ ಅಂಗವಾಗಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಎಸ್.ಎಂ. ಇಬ್ರಾಹಿಂ ನೇತೃತ್ವದಲ್ಲಿ ಸಾರ್ವಜನಿಕರಿಗೆ ವಿಜ್ಞಾನ ವಸ್ತುಪ್ರದರ್ಶನ ಏರ್ಪಡಿಸಿದ್ದು ಎಲ್ಲರ ಗಮನ ಸೆಳೆಯಿತು.