ವೀರಾಜಪೇಟೆ, ಜ. 27: ಶ್ರೀ ಆದಿ ದಂಡಿನ ಮಾರಿಯಮ್ಮ ದೇಗುಲವು ಪುನರ್ ನಿರ್ಮಾಣಗೊಂಡು ಶ್ರೀ ಮಾರಿಯಮ್ಮ ದೇವಿ ಮತ್ತು ಸಹಪರಿವಾರ ದೇವರುಗಳ ಪ್ರತಿಷ್ಠಾಪನಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು.

ವೀರಾಜಪೇಟೆ ನಗರದ ಶಕ್ತಿ ದೇವತೆಗಳಲ್ಲೊಂದಾದ ಶಿವಕೇರಿಯ ಆದಿ ದಂಡಿನ ಮಾರಿಯಮ್ಮ (ಕೊಣನ ಮಾರಿಯಮ್ಮ) ಪುರಾತನ ದೇವಾಲಯವು ಶಿಥಿಲಗೊಂಡಿತ್ತು. ಭಕ್ತರ ಮತ್ತು ಆಡಳಿತ ಮಂಡಳಿಯ ಹಾಗೂ ಜನಾಂಗ ಬಾಂದವರ ಸಹಾಯದಿಂದ ದೇಗುಲವು 60 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಎಂಟು ತಿಂಗಳ ದೇಗುಲ ಕುಶಲಕರ್ಮಿಗಳ ಅವಿತರ ಶ್ರಮದಿಂದ ಪುನರ್ ನಿರ್ಮಾಣಗೊಂಡಿದೆ. ಶ್ರೀ ದಂಡಿನ ಮಾರಿಯಮ್ಮ ದೇವಿಯ ಭವ್ಯವಾದ ಮೂರ್ತಿ, ಚಾಮುಂಡಿ ಗುಳಿಗ ಹಾಗೂ ಸಹ ಪರಿವಾರ ದೇವರುಗಳ ಪ್ರತಿಷ್ಠಾಪನೆ ಮೀನ ಲಗ್ನದಲ್ಲಿ ಕುಕ್ಲೂರು ಶ್ರೀ ಮೂಲ ಭದ್ರಕಾಳಿ ದೇವಾಲಯದ ಅರ್ಚಕರಾದ ಶ್ರೀನಿವಾಸ್ ಭಟ್ ಮತ್ತು ವೇದಮೂರ್ತಿ ತಂತ್ರಿಗಳಾದ ಮುಕ್ಕೂರು ರಾಘವೇಂದ್ರ ಪ್ರಸಾದ್ ಶಾಸ್ತ್ರಿ ಹಾಗೂ ಸಹ ಪುರೋಹಿತರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ತಮಿಳುನಾಡಿನ ಖ್ಯಾತ ಶಿಲ್ಪಿಗಳಿಂದ ಕೆತ್ತಿಸಲಾದ ಏಕಶಿಲಾ ಕಲ್ಲಿನ ಮೂರ್ತಿಯನ್ನು ನಂದಿವಾಹನದಲ್ಲಿ ನಗರದ ಮುಖ್ಯ ಬೀದಿಗಳಲ್ಲಿ ಮಂಗಳ ವಾದ್ಯದೊಂದಿಗೆ ಮೆರವಣಿಗೆ ನಡೆಸಿ ದೇವಾಲಯದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು ದೇವಾಲಯದ ಆಡಳಿತ ಮಂಡಳಿ ವತಿಯಿಂದ ಮಹೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ದೇಗುಲದ ಆಡಳಿತ ಮಂಡಳಿಯ ಸದಸ್ಯರಾದ ಹೆಚ್.ಜಿ. ಪಾಪಯ್ಯ ನಂದಕುಮಾರ್, ಸತೀಶ್ ಕುಮಾರ್, ವೆಂಕಟರಮಣ ಮತ್ತು ಶ್ರೀನಿವಾಸ್ ಹಾಗೂ ಊರಿನ ಹಿರಿಯರು, ಗ್ರಾಮಸ್ಥರು ಹಾಜರಿದ್ದರು.