ಮಡಿಕೇರಿ, ಜ. 27: ನಗರದ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದ ವಿಶಾಲ ಸಭಾಂಗಣದಲ್ಲಿ ಇಂದಿನಿಂದ ಎರಡು ದಿನ ರೋಟರಿ ಜಿಲ್ಲಾ ಸಮ್ಮೇಳನ 2018 - ಸಂಗಮ ಕಾರ್ಯಕ್ರಮಕ್ಕೆ ಇಂದು ರಾಷ್ಟ್ರಧ್ವಜ ಹಾಗೂ ರೋಟರಿ ಧ್ವಜಾರೋಹಣದ ಬಳಿಕ ಬ್ರಿಟನ್‍ನ ನಿವೃತ್ತ ಮುಖ್ಯ ಪೊಲೀಸ್ ಅಧೀಕ್ಷಕರಾದ ರೋ.ರೇ. ಬರ್ಮನ್ ಚಾಲನೆ ನೀಡಿದರು. ದೀಪೋಜ್ವಲನದೊಂದಿಗೆ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೋಟರಿಯಂತ ಸೇವಾ ಸಂಸ್ಥೆಯಲ್ಲಿ ಲಭಿಸುವಂತಹ ಉತ್ತಮ ಅವಕಾಶಗಳನ್ನು ಪ್ರತಿಯೊಬ್ಬರು ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ತಮ್ಮ ಬದುಕಿನ ಋಣವನ್ನು ಸೇವೆಯ ಮೂಲಕ ತೀರಿಸುವಂತೆ ಕರೆ ನೀಡಿದರು.
ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಯ ಅಧ್ಯಕ್ಷರ ಪ್ರತಿನಿಧಿಯಾಗಿ ತೈವಾನ್ ದೇಶದಿಂದ ಆಗಮಿಸಿದ್ದ ರೋ. ನಿವೃತ್ತ ಗವರ್ನರ್ ಪ್ರೊ. ಜಂಗ್ಲಿನ್ ಅವರು ಮಾತನಾಡಿ, ಸಂಸ್ಥೆಯ ವಿಶ್ವವ್ಯಾಪಿ ಚಟುವಟಿಕೆಗಳನ್ನು ನೆನಪಿಸಿದರಲ್ಲದೆ, ಅಂತರ್ರಾಷ್ಟ್ರೀಯ ಅಧ್ಯಕ್ಷರ ವಿಶೇಷ ಸಂದೇಶವನ್ನು ಪ್ರತಿನಿಧಿಗಳಿಗೆ ತಿಳಿಸಿದರು. ರೋಟರಿ ಜಿಲ್ಲಾ ಗವರ್ನರ್ ರೋ. ಮಾತಂಡ ಸುರೇಶ್ ಚಂಗಪ್ಪ ಅವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸುವದರೊಂದಿಗೆ ಕಾರ್ಯಕ್ರಮ ನಡೆಸಿ ಕೊಟ್ಟರು.
ವೇದಿಕೆಯಲ್ಲಿ ಸಮಾವೇಶ ಸಮಿತಿಯ ಅಧ್ಯಕ್ಷ ರೋ. ಡಿ.ಎಂ. ಕಿರಣ್, ಜಿಲ್ಲಾ ಕಾರ್ಯದರ್ಶಿ ರೋ. ಎಂ. ಈಶ್ವರ ಭಟ್, ರೋ. ಮೋಹನ್ ಕರುಂಬಯ್ಯ ಹಾಗೂ 9 ವಲಯಗಳ ಸಹ ಗವರ್ನರ್‍ಗಳು, ವಲಯ 6ರ ಎಲ್ಲಾ ಕ್ಲಬ್‍ಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದು, ರೋ. ಜೀವನ್ ಕುಶಾಲಪ್ಪ ವಂದಿಸಿದರು.
ಅವಧಿ ಒಂದು : ದಿನದ ಮೊದಲನೇ ಅವಧಿಯಲ್ಲಿ ರೋ. ಡಾ. ಎ. ವೇಲ್‍ಮಣಿ ಅವರು ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ತಮ್ಮ ಜೀವನದ ಅನುಭವದಲ್ಲಿ ಶೂನ್ಯದಿಂದ ಕೋಟಿ ರೂ.ಗಳ ಗಳಿಕೆಯ ಅನುಭವವನ್ನು ಹಂಚಿಕೊಂಡರು. ತಮಿಳುನಾಡಿನಲ್ಲಿ ಕಡು ಬಡತನದ ನಡುವೆ ಜನಿಸಿ ಗುರಿಯಿಲ್ಲದ ಹಾದಿಯಲ್ಲಿ ಹೇಗೋ ಮುಂಬೈ ತಲುಪದರೊಂದಿಗೆ ಮೂರು ದಿನಗಳ ಕಾಲ ರೈಲ್ವೆ ನಿಲ್ದಾಣದಲ್ಲಿ ಕಳೆದು ಅನಂತರದಲ್ಲಿ ಅಲ್ಲಿನ ಬಾಬಾ ಅಣುವಿಜ್ಞಾನ ಸಂಸ್ಥೆಯಲ್ಲಿ ಸಣ್ಣದೊಂದು ಕೆಲಸಕ್ಕೆ ಸೇರಿದನ್ನು ಮೆಲುಕು ಹಾಕಿದರು. ಮಾತ್ರವಲ್ಲದೆ ಭವಿಷ್ಯದಲ್ಲಿ ಹೆಚ್ಚಿನ ಜ್ಞಾನದೊಂದಿಗೆ ಓರ್ವ ವಿಜ್ಞಾನಿಯಾಗಿ ಸಾಧನೆ ಮಾಡುತ್ತಾ ಪ್ರಸಕ್ತ ‘ಥೈರೋಕೇರ್’ ನಂತಹ ಸಮೂಹ ಸಂಸ್ಥೆ ಹುಟ್ಟು ಹಾಕಿ ರೂ. 4 ಸಾವಿರ ಕೋಟಿಗಳ ಒಡೆಯನಾಗಿ ಸಮಾಜದ ನಡುವೆ ನಿಂತಿರುವದಾಗಿ ಉದಾಹರಿಸಿದರು.
ಅವಧಿ - 2 : ಎರಡನೇ ಅವಧಿಯಲ್ಲಿ ಭಾರತೀಯ ಕೃಷಿ ಕ್ಷೇತ್ರದ ಪ್ರಸಕ್ತ ಸನ್ನಿವೇಶವನ್ನು ಮೆಲುಕು ಹಾಕಿದ ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ಉಪ ಕುಲಪತಿ ಡಾ. ಪಿ.ಜಿ. ಚಂಗಪ್ಪ ಅವರು ಈ ಕ್ಷೇತ್ರವನ್ನು ಪ್ರಗತಿಯತ್ತ ಕೊಂಡೊಯ್ಯುವ ದಿಸೆಯಲ್ಲಿ ಅನುಸರಿಸಬೇಕಾದ ಮಾರ್ಗೋಪಾಯಗಳನ್ನು ವಿವರಿಸಿದರು. ಅಲ್ಲದೆ ಕೃಷಿ ಕ್ಷೇತ್ರದ ಅಂಕಿ ಅಂಶಗಳನ್ನು
(ಮೊದಲ ಪುಟದಿಂದ) ನೀಡುತ್ತಾ, ದೇಶದ ಅಭ್ಯುದಯಕ್ಕೆ ಕೃಷಿ ಅವಶ್ಯಕತೆಯ ಕುರಿತು ನೆನಪಿಸಿದರು.
ಅವಧಿ - 3 : ರೇಡಿಯೋ ಮತ್ತು ಕಿರುತೆರೆಯ ಉದ್ಘೋಷಕಿ ವಸಂತಿ ಹರಿಪ್ರಕಾಶ್ ಅವರು ತಮ್ಮ ಅವಧಿಯಲ್ಲಿ ವಿಷಯ ಮಂಡಿಸುತ್ತಾ, ವಿವಿಧ ಕ್ಷೇತ್ರದಲ್ಲಿ ಸಾಮಾನ್ಯರು ಛಲದೊಂದಿಗೆ ಬದುಕಿನಲ್ಲಿ ತೋರಿದ ಸಾಧನೆಗಳತ್ತಾ, ಬೊಟ್ಟು ಮಾಡಿದರು. ಆ ಮೂಲಕ ಮಾನವನ ಜೀವನವನ್ನು ಸಾರ್ಥಕಪಡಿಸಿಕೊಂಡ ಕುರಿತಾಗಿ ಪ್ರತಿಯೊಬ್ಬರು ಕಾಳಜಿ ವಹಿಸುವಂತೆ ಕಿವಿಮಾತು ಹೇಳಿದರು.
ಅವಧಿ - 4 : ಹಾಸ್ಯ ಕಲಾವಿದೆ ಸುಧಾ ಬರಗೂರು ಅವರು ತಮ್ಮ ವಿಚಾರಗಳನ್ನು ಹಾಸ್ಯಲೇಪನದೊಂದಿಗೆ ಮಂಡಿಸುತ್ತಾ, ಇಂದಿನ ಯುವ ಪೀಳಿಗೆ ಮೌಲ್ಯಯುತ ಶಿಕ್ಷಣ ಹಾಗೂ ಬದುಕಿನಿಂದ ವಿಮುಖರಾಗಿ ಮೊಬೈಲ್‍ನಂತಹ ಆಧುನಿಕ ಉಪಕರಣಗಳ ದಾಸರಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಪ್ರಸಕ್ತ ಯುವ ಪೀಳಿಗೆ ಹಾಸ್ಯ ಹಾಗೂ ಒಳ್ಳೆಯ ವಿಚಾರಗಳಿಂದ ಹಾದಿ ತಪ್ಪುತ್ತಿರುವ ಬಗ್ಗೆ ಪೋಷಕರು ಜಾಗೃತಿ ವಹಿಸಬೇಕೆಂದು ತಿಳಿ ಹೇಳಿದರು. ತಮ್ಮ ಎಂದಿನ ಹಾಸ್ಯ ಲಹರಿಯಿಂದ ರೋಟರಿ ಪ್ರತಿನಿಧಿಗಳನ್ನು ನಗೆಗಡಲಲ್ಲಿ ತೇಲಿಸಿದರು.
ಅವಧಿ - 5 : ಯುವ ಜನಾಂಗಕ್ಕೆ ಮುಂದಾಳತ್ವ ಮೈಗೂಡಿಸಿಕೊಳ್ಳುವ ಗುಣಗಳನ್ನು ರೋಟರಿಯಂತಹ ಸಂಸ್ಥೆಗಳು ಕಲಿಸುವ ದಿಸೆಯಲ್ಲಿ ತರಬೇತಿ ಶಿಬಿರಗಳನ್ನು ಆಯೋಜಿಸುವ ಅಗತ್ಯವಿದೆ ಎಂದು ಈ ಅವಧಿಯಲ್ಲಿ ಕರ್ನಾಟಕ ಪೊಲೀಸ್ ಸಹಾಯಕ ನಿರ್ದೇಶಕ, ಕೊಡಗಿನ ಹಿಂದಿನ ಪೊಲೀಸ್ ಅಧೀಕ್ಷಕ ಭಾಸ್ಕರ್‍ರಾವ್ ಸಲಹೆ ನೀಡಿದರು. ಉತ್ತಮ ಸಮಾಜ ನಿರ್ಮಾಣ ದೃಷ್ಟಿಯಿಂದ ರೋಟರಿಯಂತಹ ಸಂಸ್ಥೆಗಳು ಈ ದಿಸೆಯಲ್ಲಿ ಕಾರ್ಯನಿರ್ವಹಿಸುವಂತೆ ಅಭಿಪ್ರಾಯಪಟ್ಟ ಅವರು, ತಮ್ಮ ಬದುಕಿಗೆ ರೋಟರಿ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರಿಂದ ಪ್ರೇರಣೆ ಲಭಿಸಿದ್ದಾಗಿ ನೆನಪಿಸಿಕೊಂಡರು.
ರೋಟರಿ ವರ್ಷ 2018-19ರ ಸಾಲಿನ ಗವರ್ನರ್‍ಗಳು ಮತ್ತು ಇತರ ಪದಾಧಿಕಾರಿಗಳ ಪರಿಚಯವನ್ನು ಮುಂದಿನ ಸಾಲಿನ ಗವರ್ನರ್ ಮಂಗಳೂರಿನ ರೋ. ರೋಹಿನಾಥ್ ನೆರವೇರಿಸಿದರು. ವಿಶಾಲ ಮೈದಾನದಲ್ಲಿ ಜಗಮಗಿಸುವ ಸಭಾಂಗಣದೊಂದಿಗೆ ಅಲಂಕೃತ ವೇದಿಕೆಯಲ್ಲಿ ಎರಡು ದಿನಗಳ ಸಮ್ಮೇಳನ ಆಯೋಜನೆಗೊಂಡಿದ್ದು, ಸುಮಾರು 1300 ಪ್ರತಿನಿಧಿಗಳು ಕೊಡಗು, ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ ಜಿಲ್ಲೆಗಳಿಂದ ಪಾಲ್ಗೊಂಡಿದ್ದರು.
ಸಂಜೆ ಸಾಂಸ್ಕøತಿಕ ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿತ್ತು.
ಇಂದಿನ ಕಾರ್ಯಕ್ರಮ : ದ್ವಿತೀಯ ದಿನದ ಸಮ್ಮೇಳನದೊಂದಿಗೆ ತಾ. 28ರಂದು (ಇಂದು) ಬೆಳಿಗ್ಗೆ 9.15ಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರು ಮಾತನಾಡಿಲಿದ್ದಾರೆ. ರೋ.ರೇ. ಬರ್ಮನ್ ಅವರು ದೇಶದ ಆಂತರಿಕ ಭದ್ರತೆ ಕುರಿತು ಭಾಷಣ ಮಾಡಲಿದ್ದು, 10.55ಕ್ಕೆ ರಾಜ್ಯ ಮಾಜೀ ಅಡ್ವೋಕೇಟ್ ಜನರಲ್ ಅಶೋಕ್ ಹಾರ್ನಹಳ್ಳಿ ಅವರು ವೃತ್ತಿಯಲ್ಲಿನ ತಾತ್ವಿಕತೆ ಕುರಿತು ಮಾತನಾಡುವರು, ಅಲ್ಲದೆ ಇನ್ನಿತರ ಪ್ರಮುಖರು ಪಾಲ್ಗೊಂಡು ವಿಚಾರ ಮಂಡಿಸಲಿದ್ದಾರೆ.