ಗೋಣಿಕೊಪ್ಪ ವರದಿ, ಜ. 27: ಕೊಡಗು ಮೂಲಕ ಹಾದು ಹೋಗಲಿರುವ ಮೈಸೂರು-ತಲಚೇರಿ ರೈಲು ಮಾರ್ಗವನ್ನು ವಿರೋಧಿಸಿ ಮೈಸೂರಿನ ದಕ್ಷಿಣ ರೈಲ್ವೆ ಕಚೇರಿ ಮುಂಭಾಗ ಫೆಬ್ರವರಿ 18 ರಂದು ಬೃಹತ್ ಪ್ರತಿಭಟನೆ ನಡೆಸುವ ನಿರ್ಧಾರವನ್ನು ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಳ್ಳ ಲಾಯಿತು. ಯೋಜನೆಯನ್ನು ಕೊಡಗು ಜಿಲ್ಲೆ ಹೊರತು ಪಡಿಸಿ ಅನುಷ್ಠಾನ ಗೊಳಿಸುವದು ಸೂಕ್ತ. ಜಿಲ್ಲೆಯಲ್ಲಿನ ಪ್ರಾಕೃತಿಕ ಸಂಪತ್ತು ಹಾಗೂ ಕೃಷಿ ಪ್ರದೇಶ ಸಂಪೂರ್ಣವಾಗಿ ನಷ್ಟ ಅನುಭವಿಸುವದರಿಂದ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕಿತ್ತು. ಆದರೆ, ಕೊಡಗಿನ ಜನತೆಯನ್ನು ಕಡೆಗಣಿಸಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವ ಬಗ್ಗೆ ಆಕ್ರೋಶ ವ್ಯಕ್ತವಾಯಿತು.

ಯೋಜನೆ ವಿರೋಧಿಸಿ ಹಂತ ಹಂತವಾಗಿ ಹೋರಾಟ ಮುಂದುವರಿಸಲು ಗ್ರಾಮ ಮಟ್ಟದಲ್ಲಿ ಹೆಚ್ಚು ಸಂಘಟಿಸುವಂತೆ ಹಾಗೂ ಮೈಸೂರಿನಲ್ಲಿ ಬೃಹತ್ ಹೋರಾಟ ಮೂಲಕ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಲಾಯಿತು.

ರೈಲು ಮಾರ್ಗ ವಿರೋಧಿ ಸಮಿತಿ ಸಂಚಾಲಕ ಕರ್ನಲ್ ಮುತ್ತಣ್ಣ ಮಾತನಾಡಿ, ಮಾಹಿತಿ ಹಕ್ಕು ಮೂಲಕ ಕೊಡಗಿನ ಮೂಲಕ ರೈಲು ಮಾರ್ಗಕ್ಕೆ ಪ್ರಸ್ತಾಪವಾಗಿರುವದು ಧೃಢಪಟ್ಟಿದೆ ಎಂದರು.

ಕೇರಳ ರಾಜ್ಯದ ಸಂಸದರು ಯೋಜನೆಯ ಅನುಷ್ಟಾನಕ್ಕೆ ಕೇಂದ್ರ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರುತ್ತಿರುವದರಿಂದ ಕೊಡಗಿನ ಜನತೆ ಹೋರಾಟಕ್ಕೆ ಸಿದ್ದರಾಗಬೇಕಿದೆ. ಪ್ರತಿಭಟನೆ ಜೊತೆಗೆ ಕಾನೂನಾತ್ಮಕ ಹೋರಾಟದ ಬಗ್ಗೆ ಕೂಡ ಚಿಂತನೆ ನಡೆದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ರಾಜೀವ್ ಬೋಪಯ್ಯ ಮಾತನಾಡಿ, ರೈಲು ಮಾರ್ಗ ಅನುಷ್ಠಾನವಾದರೆ ಕಾಫಿ ಹಾಗೂ ಕಾಳುಮೆಣಸು ಬೆಲೆ ಏರಿಕೆಯ ಆಸೆ ತೋರಿಸಿ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಕೊಡಗಿನ ವಿವಿಧ ಸಮಾಜಗಳ ಸಹಕಾರದೊಂದಿಗೆ ಪೊನ್ನಂಪೇಟೆ ಕೊಡವ ಸಮಾಜ ಹೋರಾಟದ ಜವಾಬ್ದಾರಿ ನಿರ್ವಹಿಸಲಿದೆ ಎಂದು ಹೇಳಿದರು.

ಹೋರಾಟ ಸಮಿತಿ ಸಂಚಾಲಕ ಮಾಚಿಮಂಡ ರವೀಂದ್ರ ಮಾತನಾಡಿ, ಹೈಟೆನ್ಷನ್ ವಿರುದ್ಧದ ಹೋರಾಟ ಜಿಲ್ಲೆಯ ಜನರಿಗೆ ಪಾಠ ಕಲಿಸಿದೆ. ರೈಲು ಮಾರ್ಗದಿಂದ ಸಾಧಕಗಳಿಗಿಂತ ಬಾಧಕಗಳು ಜಾಸ್ತಿಯಿವೆ ಎಂದರು.

ಯುಕೋ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಮಾತನಾಡಿ ಕೊಡಗಿನ ನೈಸರ್ಗಿಕ ಸಂಪತ್ತನ್ನು ನಾಶ ಮಾಡುವ ಹುನ್ನಾರದಿಂದ ರೈಲು ಮಾರ್ಗದ ಅನುಷ್ಠಾನಕ್ಕೆ ಕೇರಳ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. ಜಿಲ್ಲೆಯನ್ನು ಅಭಿವೃದ್ಧಿ ಹೆಸರಿನಲ್ಲಿ ದಿಕ್ಕುತಪ್ಪಿಸಲಾಗುತ್ತಿದೆ ಎಂದರು.

ಅಜ್ಜಿಕುಟ್ಟೀರ ಪೊನ್ನಣ್ಣನವರು ಮಾತನಾಡಿ, ಸರ್ಕಾರದ ಮಟ್ಟದಲ್ಲಿ ಅಧಿಕೃತವಾಗಿ ಮಾರಕ ಯೋಜನೆಗಳು ಸ್ಥಗಿತಗೊಳ್ಳುವ ಖಚಿತ ಭರವಸೆ ನೀಡದಿದ್ದರೆ ಮುಂದಿನ ಚುನಾವಣೆಯಲ್ಲಿ “ನೋಟಾ” ಮತ ಚಲಾಯಿಸುವಂತೆ ಸಲಹೆ ನೀಡಿದರು.

ಅಮ್ಮತ್ತಿಯ ಕಾಫಿ ಬೆಳೆಗಾರ ಐನಂಡ ಜಪ್ಪು ಅಚ್ಚಪ್ಪ ಮಾತನಾಡಿ, ಕನ್ನಡ ಸಂಘಟನೆಗಳು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತ ವಾಗುತ್ತಿದೆ, ಕನ್ನಡ ನೆಲ ಜಲಕ್ಕೆ ಧಕ್ಕೆ ಬಂದರೆ ಹೋರಾಟ ಮಾಡುವದಾಗಿ ಘೋಷಿಸಿ ಕೊಂಡರೂ, ಕೊಡಗು ಕನ್ನಡ ನಾಡಿನಲ್ಲಿ ಇಲ್ಲವೆನ್ನುವ ಭಾವನೆ ಕನ್ನಡ ಸಂಘಟನೆಗಳದ್ದಾಗಿದೆ. ಜಿಲ್ಲೆಯ ಮೂಲಕ ರೈಲ್ವೆ, ಬಹುಮಾರ್ಗದ ಹೆದ್ದಾರಿ ಯೋಜನೆಯಿಂದ ಕೊಡಗಿನ ವಿನಾಶವಾಗುತ್ತಿದೆ. ಈ ನಿಟ್ಟನಲ್ಲಿ ಕನ್ನಡ ಸಂಘಟನೆಗಳ ನಿಲುವೇನೆಂದು ಪ್ರಶ್ನಿಸಿದ ಅವರು, ಕೊಡಗು ಉಳಿದರೆ ಮಾತ್ರ ಕಾವೇರಿ ನದಿ ರಕ್ಷಣೆ ಸಾಧ್ಯ ಎಂದು ಹೇಳಿದರು.

ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಮುಕ್ಕಾಟೀರ ಪ್ರವೀಣ್ ಭೀಮಯ್ಯ, ನೂರೇರ ಮನೋಜ್, ಕಾಂಗ್ರೆಸ್ ವಕ್ತಾರ ಅಪೆಟ್ಟೀರ ಟಾಟು ಮೊಣ್ಣಪ್ಪ, ಬಿ.ಜೆ.ಪಿ. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಮಾಚಂಗಡ ಯಮುನಾ ಚಂಗಪ್ಪ, ಬಾಳೆಲೆ ವಲಯ ಕಾಂಗ್ರೆಸ್ ಅಧ್ಯಕ್ಷ ಆದೇಂಗಡ ವಿನು ಉತ್ತಪ್ಪ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್, ಪೊನ್ನಂಪೇಟೆ ಎ.ಪಿ.ಎಂ.ಸಿ. ಅಧ್ಯಕ್ಷ ಮಲ್ಲಮಡ ಪ್ರಬು ಪೂಣಚ್ಚ. ಪ್ರಮುಖರಾದ ಚೆಪ್ಪುಡಿರ ಸುಜ ಕರುಂಬಯ್ಯ, ಚೆಪ್ಪುಡಿರ ಶೆರಿ ಸುಬ್ಬಯ್ಯ, ಗುಡಿಯಂಗಡ ನಾಚಪ್ಪ, ಕರ್ತಮಾಡ ಮಿಲನ್ ಮಾದಪ್ಪ, ನಾಲ್ಕೇರಿ ಗ್ರಾ.ಪಂ. ಅಧ್ಯಕ್ಷ ಮುತ್ತಪ್ಪ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಪೃಥ್ಯು, ಕೊಡಗು ಹೆಗ್ಗಡೆ ಸಮಾಜದ ಉಪಾಧ್ಯಕ್ಷ ಕೊರಕುಟ್ಟೀರ ಸರಾ ಚಂಗಪ್ಪ, ಕೊಡಗು ಹಿಂದು ಮಲಯಾಳಿ ಸಂಘದ ಅಧ್ಯಕ್ಷ ಶರತ್‍ಕಾಂತ್, ಇಗ್ಗುತ್ತಪ್ಪ ಕೊಡವ ಸಮಾಜದ ಅಧ್ಯಕ್ಷೆ ಕೊಣಿಯಂಡ ಬೋಜಮ್ಮ, ತಾ.ಪಂ ಸದಸ್ಯೆ ಆಶಾ ಜೇಮ್ಸ್, ಕೊಡಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೈಬುಲಿರ ಹರೀಶ್, ಬಾಳೆಲೆ ಕೊಡವ ಸಮಾಜದ ಅಧ್ಯಕ್ಷ ಮಲಚೀರ ಬೋಸ್ ಚಿಟ್ಟಿಯಪ್ಪ, ಸುಳ್ಳಿಮಾಡ ರಾಖೇಶ್ ಹಾಗೂ ವಿವಿಧ ಕೊಡವ ಸಮಾಜದ ಅಧ್ಯಕ್ಷರುಗಳು ಇದ್ದರು.