ಕುಶಾಲನಗರ, ಜ. 27: ಕುಶಾಲನಗರದಲ್ಲಿ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವದೆಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ತಿಳಿಸಿದ್ದಾರೆ.
ಅವರು ಕುಶಾಲನಗರಕ್ಕೆ ಭೇಟಿ ನೀಡಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣದ ಒಳಚರಂಡಿ ಯೋಜನೆಯ ಅಂತಿಮ ಹಂತದ ಕಾಮಗಾರಿ ಸ್ಥಗಿತಗೊಂಡಿದ್ದು ಸಂಸ್ಕರಣಾ ಘಟಕದ ಜಾಗ ಪರಿಶೀಲನೆ ನಡೆಸಲಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿ ಗಳೊಂದಿಗೆ ಮಾಹಿತಿ ಸಂಗ್ರಹಿಸಿ ಯೋಜನೆ ಪೂರ್ಣಗೊಳಿಸ ಲಾಗುವದು ಎಂದರು.
ಹಾರಂಗಿ ರಸ್ತೆಯ ಸರಕಾರಿ ಕಾಲೇಜು ಬಳಿ ಇರುವ ಎಸ್‍ಟಿಪಿ ಘಟಕದ ಸ್ಥಳದ ಬಗ್ಗೆ ಗೊಂದಲ ಏರ್ಪಟ್ಟಿರುವ ಬಗ್ಗೆ ಒಳಚರಂಡಿ ಮಂಡಳಿ ಅಧಿಕಾರಿಗಳು ಆದಷ್ಟು ಬೇಗನೆ ಸರಿಪಡಿಸುವಂತೆ ಸ್ಥಳದಲ್ಲಿಯೇ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಜಾಗದ ಸಮರ್ಪಕ ದಾಖಲೆಗಳನ್ನು ಪರಿಶೀಲಿಸಿ ಎಸ್‍ಟಿಪಿ ಘಟಕ ನಿರ್ಮಾಣ ಕಾಮಗಾರಿ ಪ್ರಾರಂಭಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು ಸರಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯನ್ನು ಬದಲಾವಣೆ ಮಾಡುವದು ಅಸಾಧ್ಯ ಎಂದರು.
ಕುಶಾಲನಗರ ಪಟ್ಟಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಲಾಮಂದಿರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶ್ರೀವಿದ್ಯಾ ಕಾಮಗಾರಿ ಪೂರ್ಣಗೊಳ್ಳದೆ ನಿಧಾನಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿ ರಘು ಅವರನ್ನು ತರಾಟೆಗೆ ತೆಗೆದುಕೊಂಡರು. ಕೂಡಲೆ ಸಂಬಂಧಿಸಿದ ಇಲಾಖೆಗಳೊಂದಿಗೆ ಸಂಪರ್ಕಿಸಿ ಕಲಾಮಂದಿರದ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ನಿರ್ಮಾಣ ಹಂತದಲ್ಲಿರುವ ಕಲಾಭವನದಲ್ಲಿ ರಾತ್ರಿ ವೇಳೆ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸ್ಥಳೀಯರು ದೂರು ನೀಡಿದ ಹಿನೆÀ್ನಲೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸುವದು, ರಾತ್ರಿ ವೇಳೆ ಕಟ್ಟಡದ ಸುತ್ತ ಬೆಳಕಿನ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ತಾವರೆಕೆರೆಯನ್ನು ಅಭಿವೃದ್ಧಿ ಗೊಳಿಸಿ ಪ್ರವಾಸಿ ಕೇಂದ್ರವನ್ನಾಗಿಸುವ ಹಿನೆÀ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕುಡಾ ಅಧ್ಯಕ್ಷರಾದ ಬಿ.ಜಿ.ಮಂಜುನಾಥ್ ಗುಂಡುರಾವ್, ಪಂಚಾಯ್ತಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಅವರಿಂದ ಮಾಹಿತಿ ಕಲೆಹಾಕಿದರು.
ಪಟ್ಟಣದಲ್ಲಿ ನಿರ್ಗತಿಕರಿಗೆ ಮನೆ ನಿರ್ಮಾಣ ಯೋಜನೆಗೆ ಸಂಬಂಧಿಸಿ ದಂತೆ ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಸರಕಾರಿ ಜಾಗಗಳ ಮಾಹಿತಿ ಸಂಗ್ರಹಿಸಿದರು. ಶಿರಾಡಿಘಾಟ್ ರಸ್ತೆ ಸಂಪರ್ಕ ಸ್ಥಗಿತಗೊಂಡ ಹಿನೆÀ್ನಲೆಯಲ್ಲಿ ಜಿಲ್ಲೆ ಮೂಲಕ ಹಾದುಹೋಗುವ ಭಾರೀ ವಾಹನಗಳ ಬಗ್ಗೆ ಕೊಪ್ಪ ಅರಣ್ಯ ಇಲಾಖೆ ತಪಾಸಣಾ ಕೇಂದ್ರದ ಅಧಿಕಾರಿಗಳೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿಗಳು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಇಲಾಖೆ ಅಧಿಕಾರಿಗಳು, ಪೊಲೀಸರಿಗೆ ಸಲಹೆ ನೀಡಿದರು.
ಈ ಸಂದರ್ಭ ತಾಲೂಕು ತಹಶೀಲ್ದಾರ್ ಮಹೇಶ್, ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ರೇಣುಕಾ, ಪಂಚಾಯ್ತಿ ಸದಸ್ಯರುಗಳಾದ ಹೆಚ್.ಜೆ.ಕರಿಯಪ್ಪ, ಮಧುಸೂದನ್, ನಂಜುಂಡಸ್ವಾಮಿ, ಫಜಲುಲ್ಲಾ, ಕಂದಾಯ ನಿರೀಕ್ಷಕ ನಂದಕುಮಾರ್, ಮುಳ್ಳುಸೋಗೆ ಗ್ರಾಮ ಪಂಚಾಯ್ತಿ ಜನಪ್ರತಿನಿಧಿಗಳು ಮತ್ತು ಸಂಘಸಂಸ್ಥೆಗಳ ಪ್ರಮುಖರು ಇದ್ದರು.
ನಾಡುಕಚೇರಿಗೆ ಭೇಟಿ
ಸುಂಟಿಕೊಪ್ಪ ನಾಡು ಕಛೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶ್ರೀವಿದ್ಯಾ ಕೆಲಸ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿದ್ದಲ್ಲದೆ ಕಛೇರಿಯ ಆವರಣದಲ್ಲಿ ಕಸ ತಾಜ್ಯ ವಸ್ತುಗಳು ಬಿದ್ದಿರುವದನ್ನು ಕಂಡು ಕಛೇರಿ ವಸತಿ ಗೃಹದ ಕಾಡು ಗಿಡಗುಂಟೆಗಳನ್ನು ಕಡಿಸಿ ಶುಚಿಯಾಗಿಡಲು ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಸಿಬ್ಬಂದಿಗಳ ವಸತಿ ಗೃಹದ ಸುತ್ತಲಿನ ವಾತವರಣ ಕಛೇರಿಯ ಆವರಣ ಸ್ವಚ್ಚಗೊಳಿಸಬೇಕು; ಕಸದ ತೊಟ್ಟಿಯನ್ನು ಗ್ರಾಮ ಪಂಚಾಯಿತಿ ಯಿಂದ ತರಿಸಿ ಕಛೇರಿಯ ಬಳಿ ಇಡಲು ಗ್ರಾಮಲೆಕ್ಕಿಗರಿಗೆ ಸೂಚಿಸಿದರು.
ಸಾರ್ವಜನಿಕರ ಕೆಲಸ ಕಾರ್ಯಕ್ರಮವನ್ನು ವಿಳಂಬ ಮಾಡದೆ ಸಕಾಲದಲ್ಲಿ ಮಾಡಕೊಡಬೇಕೆಂದು ಕಛೇರಿ ಸಿಬ್ಬಂದಿಗಳಿಗೆ ತಿಳಿಹೇಳಿದರು.