ಸೋಮವಾರಪೇಟೆ, ಜ. 27: ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವಾರ್ಷಿಕ ಮಹಾಸಭೆ ಮತ್ತು ಮುಂದಿನ ಸಾಲಿನ ಆಡಳಿತ ಮಂಡಳಿ ಚುನಾವಣೆ ಮಾ. 11 ರಂದು ಇಲ್ಲಿನ ಕೊಡವ ಸಮಾಜದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಆರ್. ಮೋಹನ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಚುನಾವಣೆಯಲ್ಲಿ ಸ್ಪರ್ಧಿಸುವವರು ಮತ್ತು ಮತದಾನದಲ್ಲಿ ಭಾಗವಹಿಸುವ ಸಂಘದ ಸದಸ್ಯರು ಫೆ. 28 ರೊಳಗೆ ಸದಸ್ಯತ್ವವನ್ನು ನವೀಕರಿಸಿಕೊಳ್ಳಬೇಕು ಎಂದರು. ಸದಸ್ಯತ್ವ ನವೀಕರಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಹೆಚ್ಚಿನ ಮಾಹಿತಿಗೆ ಸಂಘದ ಪದಾಧಿಕಾರಿಗಳನ್ನು ಸಂಪರ್ಕಿಸ ಬಹುದು ಎಂದು ತಿಳಿಸಿದರು. ಮಾ. 11 ರಂದು ಬೆಳಿಗ್ಗೆ 9.30 ಗಂಟೆಗೆ ವಾರ್ಷಿಕ ಮಹಾಸಭೆ, ಅಪರಾಹ್ನ 2 ಗಂಟೆಯಿಂದ ಸಂಜೆ 4.30 ರವರೆಗೆ ಮತದಾನ ನಡೆಯಲಿದ್ದು, ನಂತರ ಎಣಿಕೆ ಕಾರ್ಯ ಜರುಗಲಿದೆ. ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಉಪಕಾರ್ಯದರ್ಶಿ ಖಜಾಂಚಿ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅಭ್ಯರ್ಥಿಗಳು 1 ಸಾವಿರ ಠೇವಣಿ ಕಟ್ಟಬೇಕು. ಫೆ. 20 ರಂದು ಬೆಳಿಗ್ಗೆ 10 ರಿಂದ 5 ರವರೆಗೆ ಸಂಘದ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲು ಅವಕಾಶವಿದೆ ಎಂದರು.

ಫೆ. 22 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 11.30ಕ್ಕೆ ನಾಮಪತ್ರ ವಾಪಸಾತಿ, ಅದೇ ದಿನ ನಾಮಪತ್ರ ಪರಿಶೀಲನೆ ಹಾಗೂ ಅಭ್ಯರ್ಥಿಗಳಿಗೆ ಚಿಹ್ನೆಯನ್ನು ಸಂಘದ ಕಚೇರಿಯಲ್ಲಿ ನೀಡಲಾಗುವದು.

ಮಾ. 11 ರಂದು ಮತದಾನ ನಡೆಯಲಿದೆ ಎಂದು ಮಾಹಿತಿ ನೀಡಿದರು. ಸದಸ್ಯರು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪಡೆಯಬೇಕು. ಫೆ. 15 ರೊಳಗೆ ಡಿ.ಎಲ್., ಆಧಾರ್ ಕಾರ್ಡ್ ಜೆರಾಕ್ಸ್, ರಕ್ತದ ಗುಂಪಿನ ಬಗ್ಗೆ ದಾಖಲೆಯನ್ನು ಸದಸ್ಯತ್ವ ನವೀಕರಣಕ್ಕೆ ಸಲ್ಲಿಸಬೇಕು. ನವೀಕರಣಗೊಂಡ ಸದಸ್ಯರಿಗೆ ಮಾತ್ರ ಮತದಾನದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ಮತದಾನದಂದು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಹೆಚ್.ಕೆ. ಗಂಗಾಧರ್, ಖಜಾಂಚಿ ಮಹಮ್ಮದ್ ಬೇಟು, ಗೌರವಾಧ್ಯಕ್ಷ ಪಿ.ಜಿ. ಶಶಿಧರ್, ಬಿ.ಪಿ. ಗಣೇಶ್ ಉಪಸ್ಥಿತರಿದ್ದರು.