ಸದಾಶಿವ ಸ್ವಾಮೀಜಿ
ಶನಿವಾರಸಂತೆ, ಜ. 27: ವೀರಶೈವ ಲಿಂಗಾಯತ ಧರ್ಮದಲ್ಲಿ ಸಮುದಾಯದ ಸಂಘಟನೆಯ ಕೊರತೆಯಿಂದಾಗಿ ವೀರಶೈವ ಸಮುದಾಯ ಬೆಳವಣಿಗೆಯಾಗಲು ಅಡ್ಡಿಯಾಗುತ್ತಿದೆ ಎಂದು ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಘಟಕ, ಕ್ರೀಡಾ ಸಮಿತಿ ವತಿಯಿಂದ ಜಿಲ್ಲಾಮಟ್ಟದ ವೀರಶೈವ ಲಿಂಗಾಯಿತ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಹಾನಗಲ್ ಕುಮಾರ ಸ್ವಾಮೀಜಿ ಅವರ 150ನೇ ಜಯಂತ್ಯುತ್ಸವ ಹಾಗೂ ವೀರಶೈವ ಲಿಂಗಾಯತ ಧಾರ್ಮಿಕ ಸಮಾವೇಶದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೀರಶೈವ ಲಿಂಗಾಯತ ಧರ್ಮದಲ್ಲಿ ಸಂಘಟನೆಯ ಕೊರತೆ ಹೆಚ್ಚಾಗುತ್ತದೆ, ಈ ದುರ್ಬಲತೆ ಸಮಾಜದ ಇತರ ಸಮುದಾಯಕ್ಕೆ ಒಳಿತಾಗುತ್ತಿದೆ. ಸರಕಾರಗಳು ವೀರಶೈವ ಸಮುದಾಯದವರನ್ನು ಕಡೆಗಣಿಸುತ್ತಿರಲು ಕಾರಣವಾಗುತ್ತಿದೆ. ವೀರಶೈವ ಧರ್ಮ ಮತ್ತು ಸಮುದಾಯವನ್ನು ಬಲಪಡಿಸಲು ಸಮುದಾಯದ ಬಾಂಧವರು ಒಂದಾಗಬೇಕಾಗಿದೆ. ವೀರಶೈವ ಸಮುದಾಯವನ್ನು ಟೀಕೆ ಮಾಡುತ್ತಿರುವ ಜನರಿಗೆ ಉತ್ತರಕೊಡಲು ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಕಾರ್ಯದರ್ಶಿ ಬಿ.ಎಸ್. ವಾಗೀಶ್ ಪ್ರಸಾದ್, ವೀರಶೈವ ಮತ್ತು ಲಿಂಗಾಯತ ಧರ್ಮದ ಎರಡು ಕಣ್ಣುಗಳಾಗಿವೆ. ವೀರಶೈವ ಲಿಂಗಾಯತ ಧರ್ಮ ಮತ್ತು ಸಮೂದಾಯವನ್ನು ಅಭಿವೃದ್ಧಿಪಡಿಸುವದು ಸಮಾಜ ಬಾಂಧವರ ಚಿಂತನೆಯಾಗಬೇಕೆಂದರು. ವೀರಶೈವ ಸಮುದಾಯ ಸಮಾಜಕ್ಕೆ ಅತೀ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ.
ಶಿಕ್ಷಣ, ದಾಸೋಹ, ಮಠ, ಶಾಲೆಗಳನ್ನು ಸ್ಥಾಪಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ. ವೀರಶೈವ ಸಮಾಜಕ್ಕೆ ಧಕ್ಕೆಯಾದರೆ ವೀರಶೈವ ಲಿಂಗಾಯತ ಧರ್ಮದ ಶಕ್ತಿಯನ್ನು ಸಮಾಜಕ್ಕೆ ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಮಾಜದಲ್ಲಿಯೇ ಕಾಲೆಳೆಯುವ ಗುಣವನ್ನು ಬೆಳೆಸಿಕೊಂಡರೆ ವೀರಶೈವ ಸಮಾಜ ದುರ್ಬಲಗೊಳ್ಳುತ್ತದೆ. ರಾಜಕಿಯ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದಾರೆ.
ಈ ನಿಟ್ಟಿನಲ್ಲಿ ಚುನಾವಣೆಯಲ್ಲಿ ವೀರಶೈವ ಜನಾಂಗದ ಯಾವದೇ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ವೀರಶೈವ ಜನಾಂಗದ ಜನಪ್ರತಿನಿಧಿಗಳು ಹೆಚ್ಚಾಗುವ ಮೂಲಕ ಸಮುದಾಯಕ್ಕೆ ಹೆಚ್ಚಿನ ಶಕ್ತಿಯನ್ನು ತುಂಬಿಸುವಂತೆ ಸಲಹೆ ನೀಡಿದರು.
ವೀರಾಜಪೇಟೆ ಕನ್ನಡ ಮಠದ ಚನ್ನಬಸವದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಸಮಾಜಕ್ಕೆ ವೀರಶೈವ ಸಮಾಜದ ಮಠಗಳು ಕೊಡುಗೆಯನ್ನು ನೀಡುತ್ತಿದೆ.
ನಮ್ಮ ದೇಶದಲ್ಲಿ ಅತೀ ಹೆಚ್ಚು ಮಠಗಳಿರುವದು ವೀರಶೈವ ಸಮಾಜ ಕೊಡುಗೆಗಳು ಎಂಬದನ್ನು ಸಮಾಜದಲ್ಲಿ ಪ್ರತಿಯೊಬ್ಬರೂ ಮನಗಾಣಬೇಕಾಗಿದೆ. ವೀರಶೈವ ಸಮಾಜದ ಬೆಳವಣಿಗೆಗಾಗಿ ಸಮುದಾಯದ ಸಮಾವೇಶ, ಕ್ರೀಡಾಕೂಟ, ಪ್ರತಿಭಾ ಪುರಸ್ಕಾರವನ್ನು ನಡೆಸುವದರಿಂದ ಸಮೂಹ ಬೆಳೆಯುತ್ತದೆ ಎಂದರು.
ನಿವೃತ್ತ ಸರಕಾರಿ ಅಭಿಯೋಜಕ ಹೆಚ್.ಎಸ್. ಚಂದ್ರಮೌಳಿ ಮಾತನಾಡಿ, ವೀರಶೈವ ಸಮಾಜದ ಉದ್ದಾರಕ್ಕಾಗಿ ಸಮುದಾಯದಲ್ಲಿ ರಾಜಕಿಯ ರಹಿತವಾಗಿ ಒಂದಾಗಬೇಕಾಗಿದೆ.
ಈ ನಿಟ್ಟಿನಲ್ಲಿ ಮುಂದಿನ ಚುನಾವಣೆಯಲ್ಲಿ ವೀರಶೈವ ಅಭ್ಯರ್ಥಿಗಳನ್ನು ಗೆಲ್ಲಿಸುವ ಚಿಂತನೆಯನ್ನು ಬೆಳೆಸಿಕೊಳ್ಳುವ ಮೂಲಕ ಸಮುದಾಯದ ಯಾವದೇ ಪಕ್ಷದ ಅಭ್ಯರ್ಥಿಗಳಾದರೂ ಅಂಥವರಿಗೆ ಮತ ಹಾಕುವಂತೆ ಮನವಿ ಮಾಡಿದರು.
ಮುದ್ದಿನಕಟ್ಟೆ ಮಠದ ಅಭಿನವ ಸಿದ್ಧಲಿಂಗಶಿವಚಾರ್ಯ ಸ್ವಾಮೀಜಿ, ವಿರಕ್ತ ಮಠದ ವಿಶ್ವೇಶ್ವರ ಸ್ವಾಮೀಜಿ, ಕಲ್ಲುಮಠದ ಮಹಾಂತ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾ ಸಭಾದ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಗೀತಾ ಜಯಂತ್, ರಾಜ್ಯ ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತ ಜೆ.ಎಸ್. ವಿರೂಪಾಕ್ಷಯ್ಯ, ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವೀರಾಜಪೇಟೆ ಅರಮೇರಿ-ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಲ್ಲಳ್ಳಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ಕ್ರೀಡಾ ಸಮಿತಿ ಅಧ್ಯಕ್ಷ ಎಸ್. ಮಹೇಶ್, ಸಮುದಾಯದ ಪ್ರಮುಖರಾದ ಜಿ.ಪಂ. ಸದಸ್ಯೆ ಕುಮುದ ಧರ್ಮಪ್ಪ, ವೀರಾಜಪೇಟೆ ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಸಂದೀಪ್, ಸುರೇಶ್, ಜಿ.ಎಂ. ಕಾಂತರಾಜು, ಡಿ.ಬಿ. ಸೋಮಪ್ಪ, ಭುವನೇಶ್ವರಿ ಹರೀಶ್, ಮಮತ ಸತೀಶ್, ಜಲಜ ಶೇಖರ್, ಕೆ.ವಿ. ಮಂಜುನಾಥ್, ಹಾಲಪ್ಪ ಮುಂತಾದವರು ಇದ್ದರು.
ಈ ಸಂದರ್ಭ ವೀರಶೈವ ಸಮಾಜದ ಶಾಲಾ, ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವೀರಶೈವ ಸಮಾಜದ ಹಿರಿಯರನ್ನು ಮತ್ತು ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.