ಮಡಿಕೇರಿ, ಜ. 27: ಗಣಪತಿ ಬೀದಿಯಲ್ಲಿರುವ ಮೀನಿನ ಮಳಿಗೆಯೊಂದಕ್ಕೆ ಸಂಬಂಧಿಸಿದಂತೆ ನಗರಸಭಾ ಸಾಮಾನ್ಯ ಸಭೆಯಲ್ಲಿಂದು ಸದಸ್ಯರ ನಡುವೆ ವಾಗ್ವಾದ ನಡೆದು ಕೆಲ ಕಾಲ ಸಭೆ ಎಂದಿನಂತೆ ಗೊಂದಲದ ಗೂಡಾಗಿತ್ತು.ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಪಕ್ಷ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್ ಅವರು ವಿಚಾರ ಪ್ರಸ್ತಾಪಿಸಿ ಗಣಪತಿ ಬೀದಿಯಲ್ಲಿ ಮೀನು ಮಾರಾಟ ಮಳಿಗೆಯೊಂದಕ್ಕೆ ಅನುಮತಿ ನೀಡಲಾಗಿದ್ದು, ಅಲ್ಲಿ ಮೀನುಗಳನ್ನು ತುಂಡರಿಸಿ ಮಾರುವಂತಿಲ್ಲ ಎಂಬ ಸೂಚನೆಯಿದ್ದರೂ ಮೀನುಗಳನ್ನು ತುಂಡರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸದಸ್ಯರಾದ ಉಣ್ಣಿಕೃಷ್ಣ, ಪಿ.ಡಿ. ಪೊನ್ನಪ್ಪ ಇವರುಗಳು ಇದಕ್ಕೆ ಧನಿಗೂಡಿಸಿದರು. ಈ ಬಗ್ಗೆ ಕೆಲ ಹೊತ್ತು ಚರ್ಚೆ ವಿಚರ್ಚೆ ನಡೆದು ಮಾನವೀಯತೆ ಆಧಾರದಲ್ಲಿ ಅನುಮತಿ ನೀಡಲಾಗಿದೆ ಎಂದು ಸದಸ್ಯ ಮನ್ಸೂರ್ ಹೇಳಿದರು. ಮಳಿಗೆ ಇರುವ ವಾರ್ಡ್ನ ಸದಸ್ಯೆ ಸವಿತಾ ರಾಕೇಶ್ ಅವರು ಕೂಡಲೇ ಆ ಮಳಿಗೆಯನ್ನು ಮುಚ್ಚಿಸುವಂತೆ ಅಧ್ಯಕ್ಷರಲ್ಲಿ ಹೇಳಿದರು.
ಬರವಣಿಗೆಯಲ್ಲಿ ನೀಡುವಂತೆ ಅಧ್ಯಕ್ಷರು ಸೂಚಿಸಿದರು. ಮಳಿಗೆಯನ್ನು ಮುಚ್ಚಿಸುವಂತೆ ಪತ್ರ ಬರೆದು ಅಧ್ಯಕ್ಷರಿಗೆ ನೀಡಿದ ಸವಿತಾ ರಾಕೇಶ್ ಅವರು ಆದಷ್ಟು ಶೀಘ್ರ ಮೀನಿನ ಮಳಿಗೆಯನ್ನು ಮುಚ್ಚಿಸುವಂತೆಯೂ, ಇಲ್ಲದಿದ್ದರೆ ವಾರ್ಡ್ ಸದಸ್ಯರು ‘ಡೀಲಿಂಗ್’ ಮಾಡಿಕೊಂಡಿದ್ದಾರೆ ಎಂಬದಾಗಿ ಮಾತುಗಳು ಬರುತ್ತವೆ ಎಂದು ಹೇಳಿದರು.
ಈ ವೇಳೆ ಮದ್ಯಪ್ರವೇಶಿಸಿದ ಸದಸ್ಯ ಮನ್ಸೂರ್ ಅಲ್ಲಿನ ಮೀನು ವ್ಯಾಪಾರಿ ಪರವಾಗಿ ನೀವು ಮಾತನಾಡಿರುವ ಬಗ್ಗೆ ನನ್ನ ಬಳಿ ಮೊಬೈಲ್ ರೆಕಾರ್ಡ್ ಇದೆ ಎಂದು ಹೇಳಿದರು. ಇದಕ್ಕೆ ಆಕ್ಷೇಪಿಸಿದ ವಿಪಕ್ಷ ಸದಸ್ಯರು ಆರೋಪವನ್ನು ಸಾಬೀತುಪಡಿಸುವಂತೆ ಮನ್ಸೂರ್ ಬಳಿ ಒತ್ತಾಯಿಸಿದರು. ಪರಿಣಾಮ ಕೆಲಹೊತ್ತು ಸಭೆ ಗೊಂದಲದ ಗೂಡಾಗಿತ್ತು. ತನ್ನ ಬಳಿ ರೆಕಾರ್ಡ್
(ಮೊದಲ ಪುಟದಿಂದ) ಇದೆ ಯಾವದೇ ದೇವಾಲಯ, ಮಸೀದಿ ಎದುರು ಪ್ರಮಾಣ ಮಾಡಲು ನಾನು ಸಿದ್ಧ ಎಂದು ಮನ್ಸೂರ್ ಹೇಳದರೆ; ಬನ್ನಿ ನಿರೂಪಿಸಿ ಎಂದು ವಿಪಕ್ಷ ಸದಸ್ಯರು ಆಗ್ರಹಿಸಿದರು. ಸದಸ್ಯ ಉದಯಕುಮಾರ್, ಮನ್ಸೂರ್ ಅವರನ್ನು ಸಮಾಧಾನಿಸಿದರೆ, ಚುಮ್ಮಿ ದೇವಯ್ಯ ಸಭೆಯ ಘನತೆ ಕಾಪಾಡುವಂತೆ ಮನವಿ ಮಾಡಿದರು. ಸದಸ್ಯರ ರಂಪಾಟ ಕಂಡು ಹಿರಿಯ ಸದಸ್ಯ ಚುಮ್ಮಿ ದೇವಯ್ಯ ಕೋರಿದರು.
ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಅವರು ಮಾತನಾಡಿ, ಒಂದೋ ಆರೋಪ ಸಾಬೀತು ಮಾಡಲಿ ಇಲ್ಲವಾದರೆ ಸದಸ್ಯೆಯ ಕ್ಷಮೆಯಾಚಿಸಲಿ ಎಂದು ಹೇಳಿದರು. ಅಲ್ಲಿ ಮೀನು ಮಾರಾಟ ಮಳಿಗೆ ಬೇಡವೇ ಬೇಡ ಈ ಬಗ್ಗೆ ವೋಟಿಂಗ್ ನಡೆಯಲಿ ಎಂದು ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಹೇಳಿದಾಗ ಸದಸ್ಯ ನಂದಕುಮಾರ್ ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಏಕವಚನದಲ್ಲಿ ಬೈದಾಡಿಕೊಂಡರು.
ಕವರಿಂಗ್ ಸ್ಲಾಬ್ ಚರ್ಚೆ
ಮಹದೇವಪೇಟೆ ರಸ್ತೆ ಕವರಿಂಗ್ ಸ್ಲ್ಯಾಬ್ ಕಾಮಗಾರಿಯನ್ನು ಡಿಸೆÀಂಬರ್ ಅಂತ್ಯದೊಳಗೆ ಪೂರ್ಣಗೊಳಿಸುದಾಗಿ ಅಧ್ಯಕ್ಷೆ ಈ ಹಿಂದೆ ಭರವಸೆ ನೀಡಿದ್ದರೂ ಕೂಡ ಕೆಲಸ ಮಾತ್ರ ಪೂರ್ಣವಾಗಿಲ್ಲ ಎಂದು ಸದಸ್ಯರಾದ ಉದಯಕುಮಾರ್, ಸವಿತಾ ರಾಕೇಶ್ ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದಾಗಿ ಶವ ಸಾಗಿಸಲು ಕೂಡ ತೊಂದರೆ ಆಗಿದೆ ಎಂದ ಉದಯಕುಮಾರ್ ಹೇಳಿದರು. ಇದೇ ವಿಚಾರವಾಗಿ ನಗರಸಭೆ ವಿರೋಧ ಪಕ್ಷದ ಸದಸ್ಯರು ಸದನದ ಬಾವಿಗಿಳಿದು ಅಧ್ಯಕ್ಷೆ ವಿರುದ್ಧ ಪ್ರತಿಭಟಿಸಿದರು.
ಇಂದಿರಾ ಕ್ಯಾಂಟೀನ್ ಗಲಾಟೆ : ಇಂದಿರಾ ಕ್ಯಾಂಟೀನ್ ಬಗ್ಗೆ ನಗರಸಭೆಯಲ್ಲಿ ಜಟಾಪಟಿ ನಡೆಯಿತು. ಸದಸ್ಯ ಕೆ.ಎಂ ಗಣೇಶ್, ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ಸೇರಿದ ಜಾಗದಲ್ಲಿ ಕ್ಯಾಂಟೀನ್ಗೆ ಸಿದ್ಧತೆ ನಡೆಯುತ್ತಿದೆ. ಬಸ್ ನಿಲ್ದಾಣದ ಜಾಗದಲ್ಲಿ ಇಂದಿರಾ ಕ್ಯಾಂಟೂನ್ ನಿರ್ಮಾಣಕ್ಕೆ ಹೇಗೆ ಅವಕಾಶ ಕಲ್ಪಿಸಲಾಗಿದೆ. ಇದು ನಗರಸಭೆಯ ಸದಸ್ಯರ ಗಮನಕ್ಕೂ ಬಂದಿಲ್ಲ. ಆ ಜಾಗವನ್ನು ಬಸ್ ನಿಲ್ದಾಣ ಕಾಮಗಾರಿಗೆ ಹೊರತು ಪಡಿಸಿ ಯಾವದೇ ಉದ್ದೇಶಕ್ಕೂ ಬಳಸಬಾರದು ಎಂದಿದ್ದರೂ ಕೂಡ ಅಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿರುವದು ಸೂಕ್ತವಲ್ಲ ಎಂದರು.
ಇದಕ್ಕೆ ಧನಿಗೂಡಿಸಿದ ಬಿಜೆಪಿ ಸದಸ್ಯರು ಕ್ಯಾಂಟೀನ್ಗೆ ಬಿಜೆಪಿಯ ವಿರೋಧವಿಲ್ಲ, ಆದರೆ ಈ ಬಗ್ಗೆ ನಮಗೆ ಕಿಂಚಿತ್ತು ಮಾಹಿತಿ ಇಲ್ಲ ಎಂದರೆ, ಸಭೆಯ ಉಪಾಧ್ಯಕ್ಷರು ಕೂಡ ಈ ಬಗ್ಗೆ ತಮಗೇನೂ ಮಾಹಿತಿ ಇಲ್ಲ. ಸಾರ್ವಜನಿಕರೊಬ್ಬರು ಕರೆ ಮಾಡಿದ ನಂತರವೇ ನನಗೂ ವಿಷಯ ತಿಳಿದಿದೆ ಎಂದರು. ಪ್ರತಿಕ್ರಿಯಿಸಿದ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಸರಕಾರಿ ಜಾಗದಲ್ಲಿಯೇ ಕ್ಯಾಂಟೀನ್ ನಿರ್ಮಿಸಬೇಕು ಎಂಬ ಆದೇಶದ ಹಿನ್ನೆಲೆ ಖಾಸಗಿ ಬಸ್ ನಿಲ್ದಾಣ ಜಾಗವನ್ನೇ ಆಯ್ಕೆ ಮಾಡಲಾಗಿದೆ ಎಂದರು. ಯಾವದೇ ನಿರ್ಣಯ ಕೈಗೊಳ್ಳುವ ಮುನ್ನ ಎಲ್ಲ ಸದಸ್ಯರೊಂದಿಗೂ ಚರ್ಚೆ ನಡೆಸಬೇಕಿತು ಎಂದು ಸದಸ್ಯರು ಆಗ್ರಹಿಸಿದರು.
ಗಾಂಧಿ ಮೈದಾನ ಗಲಾಟೆ : ಕ್ರೀಡಾ ಚಟುವಟಿಕೆ ಹಾಗೂ ಕಾರ್ಯಕ್ರಮಗಳಿಗೆ ಮಾತ್ರ ಗಾಂಧಿ ಮೈದಾನವನ್ನು ನೀಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆದರೂ ಗಾಂಧಿ ಮೈದಾನದಲ್ಲಿ ವಸ್ತು ಪ್ರದರ್ಶನಕ್ಕೆ ಅವಕಾಶ ಒದಗಿಸಿರುವದು ಖಂಡನಾರ್ಹ. ವಸ್ತು ಪ್ರದರ್ಶನದ ಮುಖ್ಯಸ್ಥ ಸಾರ್ವಜನಿಕರೊಂದಿಗೆ ಈ ವಿಚಾರವಾಗಿ ನಗರಸಭೆಯ ಸದಸ್ಯರಿಗೆ ರೂ. 30 ಲಕ್ಷ ನೀಡಿದ್ದಾಗಿ ಹೇಳುತ್ತಿದ್ದಾನೆ. ಇದಕ್ಕೆ ಕಾರಣ ಯಾರು ಎಂದು ಸದಸ್ಯೆ ವೀಣಾಕ್ಷಿ, ಅಧ್ಯಕ್ಷೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.