ಮಡಿಕೇರಿ, ಜ. 27: ದೇಶದ ಅಪ್ರತಿಮ ದಂಡನಾಯಕ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ 119ನೇ ಜನ್ಮದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಲ್ಲೂ ರಾಷ್ಟ್ರಪ್ರೇಮ ಮೂಡಿಸುವ ನಿಟ್ಟಿನಲ್ಲಿ ರಾಷ್ಟ್ರಗೀತೆ ಹಾಡುವ ಸ್ಪರ್ಧೆಯನ್ನು ಆಯೋಜಿಸಿ ಕೊಂಡು ಬರಲಾಗುತ್ತಿದೆ. ವಿಜೇತರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗು ತ್ತಿದೆ. ಆದರೆ, ಇಂದು ಹಮ್ಮಿಕೊಂಡಿದ್ದ ಕಾರ್ಯಕ್ರಮ ಪಾಲ್ಗೊಂಡಿದ್ದ ಮಕ್ಕಳಿಗೆ ರಾಷ್ಟ್ರಕ್ಕೆ, ರಾಷ್ಟ್ರಕಂಡ ನಾಯಕನಿಗೆ, ರಾಷ್ಟ್ರಗೀತೆಗೆ ಅವಮಾನ ಮಾಡುವ ರೀತಿಯಲ್ಲಿತ್ತು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕೊಡುವ ಬದಲಿಗೆ ಅವರಲ್ಲಿನ ಉತ್ಸಾಹವನ್ನು ಕುಂಠಿತಗೊಳಿಸುವ ಮಟ್ಟದಲ್ಲಿತ್ತು ಎಂದರೆ ತಪ್ಪಾಗಲಾರದು...!

ಇದುವರೆಗೆ ಫೀ.ಮಾ. ಕಾರ್ಯಪ್ಪ ಹಾಗೂ ಜ. ತಿಮ್ಮಯ್ಯ ಫೋರಂ ವತಿಯಿಂದ ಸ್ಪರ್ಧಾ ಕಾರ್ಯಕ್ರಮ ವನ್ನು ಅಚ್ಚುಕಟ್ಟಾಗಿ ಏರ್ಪಡಿಸಲಾಗು ತ್ತಿತ್ತು. ಈ ಬಾರಿ ಜಿಲ್ಲಾಡಳಿತದ ವತಿಯಿಂದ ಜನ್ಮ ದಿನಾಚರಣೆ ಆಚರಿ ಸುತ್ತಿದ್ದು, ಸ್ಪರ್ಧಾ ಕಾರ್ಯಕ್ರಮದ ಜವಾಬ್ದಾರಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯದ್ದಾಗಿತ್ತು. ಅಂತೆಯೇ ಇಲಾಖೆ ಪ್ರಕಟಣೆ ಹೊರಡಿಸಿ ತಾ. 27 ರಂದು ಬೆಳಿಗ್ಗೆ 9 ಗಂಟೆಗೆ ಕೋಟೆ ಆವರಣದಲ್ಲಿ ಎಲ್ಲ ವಿದ್ಯಾರ್ಥಿಗಳು ಹಾಜರಿರಬೇಕೆಂದು ಸೂಚನೆ ನೀಡಲಾಗಿತ್ತು.

ಇಲಾಖೆಯ ಸೂಚನೆಯಂತೆ ಜಿಲ್ಲೆಯ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು 9 ಗಂಟೆ ವೇಳೆಗೆ ಸ್ಥಳದಲ್ಲಿ ಜಮಾಯಿಸಿದ್ದರು. ಆದರೆ ಅಲ್ಲಿ ಆಯೋಜಕರೇ ಇರಲಿಲ್ಲ. ಅಲ್ಲದೆ ಯಾವದೇ ವ್ಯವಸ್ಥೆ ಕೂಡ ಇರಲಿಲ್ಲ.

ನಂತರದಲ್ಲಿ ಆಗಮಿಸಿದ ಕೆಲವರು ಕೋಟೆ ಆವರಣದಲ್ಲಿ ನಾಳಿನ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಿಸಲು ಅಣಿಯಾಗುತ್ತಿದ್ದ ಡೆಕೋರೇಟರ್ಸ್ ಅವರಿಗೆ ಶಾಮಿಯಾನ ಹಾಗೂ ಮೈಕ್ ವ್ಯವಸ್ಥೆ ಮಾಡಿಕೊಡುವಂತೆ ಕೋರಿಕೊಂಡ ಮೇರೆಗೆ 11 ಗಂಟೆ ವೇಳೆಗೆ ವಾಹನ ನಿಲುಗಡೆ ಪ್ರದೇಶದ ಮರದ ಕೆಳಗಡೆ ಒಂದು ಸಣ್ಣ ಶಾಮಿಯಾನ ಸೆಟ್ಟೇರಿತು. ಆದರೆ ಧ್ವನಿವರ್ಧಕ ಸರಿಯಾಗಲಿಲ್ಲ. ಅದಾಗಲೇ ಗಂಟೆ 11.30 ಕಳೆಯುತ್ತಿದ್ದಂತೆ ಸ್ಥಳಕ್ಕೆ ಡಿಡಿಪಿಐ, ಬಿಇಓ ಅವರುಗಳು ಆಗಮಿಸಿದರು. ಎಲ್ಲ ವಿದ್ಯಾರ್ಥಿ ಗಳನ್ನು ಹತ್ತಿರ ಬರುವಂತೆ ಹೇಳಿ ಒಂದೆಡೆ ಗುಡ್ಡೆ ಸೇರಿಸಿ ಏನೋ ಮಾತಾಡಿ ಹೋದರು. ಆದರೆ ಆ ಗಜಿಬಿಜಿಯಲ್ಲಿ ಏನು ಹೇಳಿದ ರೆಂದು ಯಾರಿಗೂ ಅರ್ಥವಾಗಲಿಲ್ಲ. ಮಕ್ಕಳಿಗೆ ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆಯೂ ಇರಲಿಲ್ಲ. ಎಲ್ಲರೂ ಕೋಟೆ ಆವರಣವಿಡೀ ಚದುರಿ ಹೋಗಿದ್ದರು.

ಈ ಸಂದರ್ಭದಲ್ಲಿ ಸ್ಥಳಕ್ಕಾಗ ಮಿಸಿದ ಫೋರಂನ ಸಂಚಾಲಕ ಮೇಜರ್ ಬಿ.ಎ. ನಂಜಪ್ಪ ಅವರು ಎಲ್ಲ ಮಕ್ಕಳನ್ನು ಕೋಟೆ ಆವರಣದ ಪೆರೇಡ್ ಮೈದಾನಕ್ಕೆ ಬರ ಹೇಳಿ ಶಿಸ್ತುಬದ್ಧವಾಗಿ ಆಯಾ ಶಾಲಾ ವಿದ್ಯಾರ್ಥಿಗಳನ್ನು ಸಾಲಾಗಿ ನಿಲ್ಲುವಂತೆ ಸೂಚಿಸಿದರು. ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲಿ ಹಾಡಬೇಕೆಂದು ಎನ್‍ಸಿಸಿ ಕೆಡೆಟ್‍ಗಳ ಮೂಲಕ ತೋರಿಸಿಕೊಟ್ಟರು. ನಂತರ ತಾವೇ ರಾಷ್ಟ್ರಗೀತೆ ಹಾಡುವ ಮೂಲಕ ತಿಳಿ ಹೇಳಿದರು.

ನಂತರ ಮರದ ಬುಡದಲ್ಲಿ ಹಾಕಿದ್ದ ಶಾಮಿಯಾನ ಹಾಗೂ ಮೇಜುಗಳನ್ನು ಎನ್‍ಸಿಸಿ ಕೆಡೆಟ್‍ಗಳ ಮೂಲಕ ಪೆರೇಡ್ ಮೈದಾನಕ್ಕೆ ಕೊಂಡೊಯ್ದು ವ್ಯವಸ್ಥೆ ಮಾಡಲಾ ಯಿತು. ಮತ್ತೆ ಧ್ವನಿವರ್ಧಕವನ್ನು ಅಲ್ಲಿಗೆ ಸ್ಥಳಾಂತರಿಸಿ ಅದು ಸರಿಯಾಗುವಷ್ಟರಲ್ಲಿ ಸಮಯ 12.30 ದಾಟಿತ್ತು. ಅಷ್ಟರಲ್ಲಾಗಲೇ ಕೆಲವು ವಿದ್ಯಾರ್ಥಿಗಳು ಮೈಕ್ ನೆರವಿಲ್ಲದೆ ಹಾಡಿಯಾಗಿತ್ತು. ಹಾಡಿದ ಬಳಿಕ ಬದಿಗೆ ಬಂದವರು ‘ನಮ್ಮ ವಾಯ್ಸ್ ಜಡ್ಜ್‍ಗಳಿಗೆ ಕೇಳ್ಸಿದೆಯೋ ಏನೋ, ಮೈಕ್‍ನಲ್ಲಿ ಹಾಡಿದವರಿಗೆ ಪ್ರೈಜ್ ಬರ್ವೋದು, ಥೂ ಎಂತ ಮಾಡೋದಪ್ಪಾ...’ ಹೀಗೆ ಮರುಕ ಪಡುತ್ತಿದ್ದುದು ಗೋಚರಿಸಿತು.

ಒಟ್ಟು ವ್ಯವಸ್ಥೆಯೇ ಅವ್ಯವಸ್ಥೆ ಯಿಂದ ಕೂಡಿದ್ದುದು ವಿದ್ಯಾರ್ಥಿ ಗಳನ್ನು ಕರೆತಂದಿದ್ದ ಶಿಕ್ಷಕ ವರ್ಗದವ ರಲ್ಲೂ ಅಸಮಾಧಾನ ಮೂಡಿಸಿತ್ತು...!