ಮಡಿಕೇರಿ, ಜ. 27: ಪ್ರಸವ ಪೂರ್ವ ಮತ್ತು ಪ್ರಸವ ನಂತರ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಅನುಸರಿಸ ಬೇಕಾದ ಕ್ರಮಗಳ ಕುರಿತು ಕಾರ್ಯಾಗಾರ ನಗರದ ಹೊಟೇಲ್ ಮಯೂರ ವ್ಯಾಲಿ ವ್ಯೂನಲ್ಲಿ ನಡೆಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆದ ಕಾರ್ಯಾಗಾರದಲ್ಲಿ ಜಿಲ್ಲೆಯಲ್ಲಿರುವ 22 ಸ್ಕ್ಯಾನಿಂಗ್ ಕೇಂದ್ರಗಳ ವೈದ್ಯರು ಪಾಲ್ಗೊಂಡಿದ್ದರು. ಪ್ರಸವ ಪೂರ್ವದಲ್ಲಿ ಲಿಂಗ ಪತ್ತೆ ಮಾಡುವದು ಶಿಕ್ಷಾರ್ಹ ಅಪರಾಧವಾಗಿದ್ದು, ಯಾವದೇ ಕಾರಣಕ್ಕೂ ಲಿಂಗಪತ್ತೆ ಮಾಡಬಾರದು. ಆ ನಿಟ್ಟಿನಲ್ಲಿ ಸರ್ಕಾರದ ನಿಯಮಗಳನ್ನು ಚಾಚುತಪ್ಪದೆ ಪಾಲಿಸಬೇಕು ಎಂದು ಸ್ಕ್ಯಾನಿಂಗ್ ಕೇಂದ್ರ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಸ್ಕ್ಯಾನಿಂಗ್ ಕೇಂದ್ರ ತೆರಯಲು ಅನುಮತಿ ಪಡೆಯುವದು ಹೇಗೆ. ಕೇಂದ್ರದಲ್ಲಿ ಅನುಸರಿಸಬೇಕಾದ ಕ್ರಮಗಳು ಹಾಗೂ ದಾಖಲೆಗಳನ್ನು ಜತನ ಮಾಡುವದು ಮತ್ತಿತರ ಬಗ್ಗೆ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಯಿತು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಆನಂದ್ ಅವರು ಜಿಲ್ಲೆಯಲ್ಲಿ 22 ಸ್ಕ್ಯಾನಿಂಗ್ ಕೇಂದ್ರಗಳಿದ್ದು, ಅವುಗಳಲ್ಲಿ 3 ಸರ್ಕಾರದ ಅಧೀನದಲ್ಲಿ ಹಾಗೂ 19 ಖಾಸಗಿ ಸ್ಕ್ಯಾನಿಂಗ್ ಕೇಂದ್ರಗಳಿವೆ ಎಂದು ಮಾಹಿತಿ ನೀಡಿದರು. ಸ್ಕ್ಯಾನಿಂಗ್ ಮಾಡಿದ ಪ್ರತಿಯೊಂದು ಮಾಹಿತಿ ಯನ್ನು ಎಫ್ ಅರ್ಜಿಯಲ್ಲಿ ಭರ್ತಿ ಮಾಡಿ ಆನ್‍ಲೈನ್‍ನಲ್ಲಿ ಸಲ್ಲಿಸಬೇಕಾಗಿರುವದರಿಂದ ಸ್ಕ್ಯಾನಿಂಗ್ ಕೇಂದ್ರದ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಆನ್‍ಲೈನ್‍ನಲ್ಲಿ ಸಲ್ಲಿಸುವ ವಿಧಾನದ ಬಗ್ಗೆ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.

ಹೆಣ್ಣು ಭ್ರೂಣ ಪತ್ತೆ ತಡೆಗಟ್ಟುವ ನಿಟ್ಟಿನಲ್ಲಿ ಪಿಸಿಪಿಎನ್‍ಡಿಟಿ (ಪ್ರಸವ ಪೂರ್ವ ಲಿಂಗ ಪತ್ತೆ ಕಾಯ್ದೆ) ಜಾರಿಗೆ ತರಲಾಗಿದೆ. 2011ರ ಜನಗಣತಿ ಪ್ರಕಾರ 0 ರಿಂದ 6 ವರ್ಷದವರೆಗಿನ ಲಿಂಗಾನುಪಾತ ದೇಶದಲ್ಲಿ 940, ಕರ್ನಾಟಕ 948, ಕೊಡಗು ಜಿಲ್ಲೆಯಲ್ಲಿ 978 ಇದ್ದು, ಪಿಸಿಪಿಎನ್‍ಡಿಟಿ ಕಾಯ್ದೆಯ ಪ್ರಕಾರ ಹೆಣ್ಣು ಭ್ರೂಣ ಪತ್ತೆ ಹಚ್ಚುವದು ಕಾನೂನು ಬಾಹಿರವಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ. ಯಾವದಾದರೂ ಸ್ಕ್ಯಾನಿಂಗ್ ಕೇಂದ್ರದಲ್ಲಿ ಪತ್ತೆ ಹಚ್ಚುವ ಕಾರ್ಯ ಕಂಡುಬಂದಲ್ಲಿ ಅಂತಹ ವೈದ್ಯರ ಹಾಗೂ ಸಿಬ್ಬಂದಿಗಳಿಗೆ 2 ರಿಂದ 5 ವರ್ಷಗಳ ಜೈಲು ಶಿಕ್ಷೆ ಮತ್ತು ರೂ. 50 ಸಾವಿರ ದಂಡ ವಿಧಿಸಲಾಗುವದು ಎಂದು ಅವರು ಮಾಹಿತಿ ನೀಡಿದರು. ಕೊಡಗು ಜಿಲ್ಲೆಯಲ್ಲಿ ಪಿಸಿಪಿಎನ್‍ಡಿಟಿ ಕಾಯ್ದೆ ಯಡಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಕ್ಷಮ ಪ್ರಾಧಿಕಾರ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಅಧ್ಯಕ್ಷತೆ ಯಲ್ಲಿ ಜಿಲ್ಲಾ ಸಲಹಾ ಸಮಿತಿ, ಜಿಲ್ಲಾ ಉಸ್ತುವಾರಿ ತನಿಖಾ ಸಮಿತಿ ಇದ್ದು, ಯಾವದೇ ರೀತಿಯ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಆಗುವ ಲೋಪ ದೋಷಗಳ ಬಗ್ಗೆ ಜಿಲ್ಲಾ ಉಸ್ತುವಾರಿ ತನಿಖಾ ಸಮಿತಿ ಹಾಗೂ ಜಿಲ್ಲಾ ಸಲಹಾ ಸಮಿತಿಯ ಮಾಹಿತಿ ಯನ್ನಾಧರಿಸಿ ಜಿಲ್ಲಾ ಸಕ್ಷಮ ಪ್ರಾಧಿಕಾರ ಕ್ರಮವನ್ನು ಜರುಗಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ತಿಳಿಸಿದರು.