ಸುಂಟಿಕೊಪ್ಪ, ಜ. 26: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಬಹುತೇಕ ಸದಸ್ಯರುಗಳು ಅಧ್ಯಕ್ಷರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕೊನೆಗೆ ಮುಂದೂಡಲಾಯಿತು. ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಕರೆಯಲಾಗಿತ್ತು.
ಗ್ರಾಮ ಪಂಚಾಯಿತಿಯ 3 ಸಾಮಾನ್ಯ ಸಭೆಗೆ ಗೈರು ಹಾಜರಾದರೆ ಸದಸ್ಯತ್ವ ರದ್ದಾಗುವ ಭೀತಿಯಿಂದ ಕಳೆದ 2 ಸಾಮಾನ್ಯ ಸಭೆಗೆ ಗೈರು ಹಾಜರಾದ ಸದಸ್ಯರುಗಳು ಸಭೆಗೆ ಆಗಮಿಸಿದ್ದರೂ ಈ ಸಭೆಗೆ ತಮ್ಮ ಸಹ ಮತ ಇಲ್ಲ. ನಮ್ಮ ಅಭಿಪ್ರಾಯವನ್ನು ಸಭೆಯ ನಿರ್ಣಯ ಪುಸ್ತಕದಲ್ಲಿ ದಾಖಲಿಸಿ, ಅಧ್ಯಕ್ಷರು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಯಾವದೇ ಕಾಮಗಾರಿಯ ಅಧಿಕೃತ ಕಾರ್ಯಕ್ರಮಕ್ಕೆ ತಿಳಿಸದೆ ನಡೆಸಲಾಗುತ್ತಿದೆ. ಆದುದರಿಂದ ಅಧ್ಯಕ್ಷರ ಬಗ್ಗೆ ವಿಶ್ವಾಸ ಇಲ್ಲದಾಗಿದೆ ಎಂದು ಜಿ.ಜಿ. ಹೇಮಂತ್ ಕುಮಾರ್, ಎ. ಶ್ರೀಧರ್ ಕುಮಾರ್, ಶಿವಮ್ಮ, ರಜಾಕ್, ಶೋಭಾ ರವಿ, ರಹೆನಾ ಫೈರೋಜ್ ಆಕ್ರೋಶದ ನುಡಿಯಾಡಿದರು.
ಕೋರಂ ಇದ್ದರೆ ಸಭೆ ನಡೆಸಬಹುದು. ಆದರೆ, ನಮ್ಮ ಒಪ್ಪಿಗೆ ಇಲ್ಲ. ತುರ್ತು ಸಭೆ ಕರೆಯದೆ ಸಾಮಾನ್ಯ ಸಭೆ ಕರೆದಿದ್ದೀರಾ ಇದು ಪಂಚಾಯಿತಿ ಕಾಯ್ದೆಯ ಗ್ರಾಮ ಸ್ವರಾಜ್ ಅಧಿನಿಯಮ ಪ್ರಕಾರ ಸರಿಯಲ್ಲ.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಗಿಡ ನೆಡುವ ಕಾರ್ಯಕ್ರಮ ಪಾರದರ್ಶಕವಾಗಿಲ್ಲ. ಅವ್ಯವಹಾರದ ಶಂಕೆ ವ್ಯಕ್ತವಾಗುತ್ತಿದೆ. ಸುಂಟಿಕೊಪ್ಪದಲ್ಲಿ 2 ಬ್ರಾಂದಿ ಅಂಗಡಿ ತೆರೆಯಲು ಪಂಚಾಯಿತಿಯ ಆಡಳಿತ ಮಂಡಳಿಯಿಂದ ಅಧಿಕೃತ ಸಮ್ಮತಿ ನೀಡದೆ ಅಧ್ಯಕ್ಷರು ಒಪ್ಪಿಗೆ ನೀಡಿದ್ದಾರೆ. ಪಂಚಾಯಿತಿಯ ಟ್ರ್ಯಾಕ್ಟರ್ ದುರಸ್ತಿಯಾದಾಗ ಕಸ ವಿಲೇವಾರಿಯನ್ನು ಸದಸ್ಯರೊಬ್ಬರ ಪತಿಗೆ ಟೆಂಡರ್ ನೀಡಿದ ಬಗ್ಗೆ ಹೇಮಂತ್ ಕುಮಾರ್, ಶ್ರೀಧರ್, ಶಿವಮ್ಮ, ಶೋಭಾ ರವಿ ಅಸಮಾಧಾನ ವ್ಯಕ್ತಪಡಿಸಿದರು.
ಅಧ್ಯಕ್ಷೆ ತಮ್ಮನ್ನು ಅವಿಧ್ಯಾವಂತರೆಂದು ಕೆಲ ಸಭೆಗಳಲ್ಲಿ ಪ್ರಸ್ತಾಪಿಸಿದ್ದಾರೆ. ಇದು ಖಂಡನೀಯ ಎಂದು ಶಿವಮ್ಮ, ಶೋಭಾ ರವಿ ಆಕ್ರೋಶ ವ್ಯಕ್ತಪಡಿಸಿದರು. ಅಧ್ಯಕ್ಷರು ಉತ್ತರಿಸಿ ನಮ್ಮ ಆಡಳಿತ ಪಾರದರ್ಶಕವಾಗಿದೆ. ಎಲ್ಲಾ ದಾಖಲೆಗಳನ್ನು ಸದಸ್ಯರುಗಳು ಪರಿಶೀಲಿಸಬಹುದು ಕಾನೂನಿನ ಚೌಕಟ್ಟಿನೊಳಗೆ ನಾವು ಕರ್ತವ್ಯ ನಿರ್ವಹಿಸುತ್ತಿದ್ದೇವೆ.
ಸದಸ್ಯರುಗಳನ್ನು ಗೌರವದಿಂದ ಕಾಣುತ್ತಿದ್ದೇನೆ. ಕೆಲ ದಾಖಲಾತಿ ಪರಿಶೀಲಿಸುವಾಗ ಅದರ ಪರಿಜ್ಞಾನ ಇರುವವರು ಬೇಕೆಂದು ಮಾತ್ರ ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ವೈಯಕ್ತಿಕ ವಿಚಾರಕ್ಕಾಗಿ ಇಲ್ಲಿ ಸಂಘರ್ಷ ಸರಿಯಲ್ಲ. ಎಲ್ಲರೂ ಒಮ್ಮತದಿಂದ ಗ್ರಾಮದ ಅಭಿವೃದ್ಧಿಗೆ ಕೈ ಜೋಡಿಸುವ ಎಂದು ಉಪಾಧ್ಯಕ್ಷ ಪಿ.ಆರ್. ಸುಕುಮಾರ್ ಹೇಳಿದರು.
ಸಭೆಯಲ್ಲಿ ಸದಸ್ಯರುಗಳಾದ ಬಿ.ಎಂ. ಸುರೇಶ್, ಸಿ. ಚಂದ್ರ, ಸೋಮಯ್ಯ, ರಜಾಕ್, ಶಾಹೀದ್, ಕೆ.ಇ. ಕರೀಂ, ಈಶ್ವರ, ವಳ್ಳಿ, ಜ್ಯೋತಿ ಭಾಸ್ಕರ್, ನಾಗರತ್ನ ಸುರೇಶ್, ಗಂಗಮ್ಮ ಭೀಮ್ಮಯ್ಯ ಹಾಗೂ ಗಿರೀಜಾ ಉದಯಕುಮಾರ್ ಉಪಸ್ಥಿತರಿದ್ದರು.