ಮಡಿಕೇರಿ, ಜ. 26: ತಾ. 30 ರಿಂದ ಫೆಬ್ರವರಿ 3ರ ತನಕ ಐದು ದಿನಗಳ ಕಾಲ ಬಿಎಸ್‍ಎನ್‍ಎಲ್ ನೌಕರರು ದೇಶವ್ಯಾಪಿ ಮುಷ್ಕರ ನಡೆಸಲಿರುವದಾಗಿ ಘೋಷಿಸಿದ್ದಾರೆ.

ದೇಶಾದ್ಯಂತ ಇರುವ ಬಿಎಸ್ ಎನ್‍ಎಲ್‍ನ 75,000 ಮೊಬೈಲ್ ಟವರುಗಳನ್ನು ಬಿಎಸ್‍ಎನ್‍ಎಲ್ ಸಂಸ್ಥೆಯಿಂದ ಬೇರ್ಪಡಿಸಿ ಪ್ರತ್ಯೇಕ ಕಂಪೆನಿಯನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದಾಗಿ ಬಿಎಸ್‍ಎನ್‍ಎಲ್ ಟವರುಗಳನ್ನು ಖಾಸಗಿಯವರು ಉಪಯೋಗಿಸಲು ಅನುಕೂಲವಾಗುವ ನೀತಿಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ. ಬಿಎಸ್‍ಎನ್‍ಎಲ್ 75,000 ಮೊಬೈಲ್ ಟವರ್‍ಗಳು ಬಿಎಸ್‍ಎನ್‍ಎಲ್‍ನಲ್ಲೇ ಉಳಿಯಬೇಕಾಗಿದೆ. ಮೊಬೈಲ್ ಟವರುಗಳು ಪ್ರತ್ಯೇಕಗೊಂಡರೆ ಬಿಎಸ್‍ಎನ್‍ಎಲ್ ಆದಾಯಕ್ಕೆ ಅಡಚಣೆ ಉಂಟಾಗುತ್ತದೆ. ಇದನ್ನು ವಿರೋಧಿಸಿ ಬಿಎಸ್‍ಎನ್‍ಎಲ್‍ನಲ್ಲಿರುವ ಎಲ್ಲಾ ಸಂಘಟನೆಗಳು ಒಟ್ಟಾಗಿ ತಾ. 30 ರಿಂದ ಫೆ. 3ರವರೆಗೆ ದೇಶಾದ್ಯಂತ ಸತ್ಯಾಗ್ರಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೊಡಗಿನಲ್ಲಿಯೂ 5 ದಿನಗಳ ಸತ್ಯಾಗ್ರಹ ನಡೆಯಲಿದೆ. ಆ ದಿನಗಳಲ್ಲಿ ಕಚೇರಿ ಕೆಲಸ ಕಾರ್ಯಗಳಲ್ಲಿ ಮತ್ತು ಬಿಎಸ್‍ಎನ್‍ಎಲ್‍ನ ಸೇವೆಗಳಲ್ಲಿ ಅಡಚಣೆ ಉಂಟಾಗಲಿದೆ ಎಂದು ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ವಿ.ಜೆ. ಅಂತೋಣಿ ಹೇಳಿಯಲ್ಲಿ ತಿಳಿಸಿದ್ದಾರೆ.