ಮಡಿಕೇರಿ, ಜ. 26: ಭಾರತ ಪೋಲಿಯೋ ಮುಕ್ತ ದೇಶವಾಗಿದ್ದರು ಮುಂಜಾಗ್ರತಾ ಕ್ರಮವಾಗಿ ಪ್ರತಿವರ್ಷ ಪಲ್ಸ್ ಪೋಲಿಯೋ ಕಾರ್ಯಕ್ರಮ ವನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು, ತಾ. 28 ರಂದು (ನಾಳೆ) ಮೊದಲ ಹಂತ ಹಾಗೂ ಮಾರ್ಚ್ 11 ರಂದು ದ್ವಿತೀಯ ಹಂತದ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಡಿಹೆಚ್‍ಓ ಡಾ. ರಾಜೇಶ್, ಜಿಲ್ಲೆಯಲ್ಲಿರುವ 5 ವರ್ಷದೊಳಗಿನ 40,627 ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ 35,971 ಹಾಗೂ ಪಟ್ಟಣದಲ್ಲಿ 4,656 ಮಕ್ಕಳಿದ್ದಾರೆ. ಹೊರ ಜಿಲ್ಲೆಗಳಿಂದ ಜಿಲ್ಲೆಗೆ ಆಗಮಿಸಿರುವ 15,394 ಮಕ್ಕಳಿಗೂ ಪೋಲಿಯೋ ಹನಿ ಹಾಕಲಾಗುವದೆಂದರು.
ಒಟ್ಟು 470 ಬೂತ್‍ಗಳು, 20 ಟ್ರಾನ್ಸಿಟ್ ತಂಡಗಳು, 6 ಮೊಬೈಲ್ ತಂಡ, ಮೇಲ್ವಿಚಾರಕರು 87, ಮನೆ ಮನೆ ಭೇಟಿಯ 966 ತಂಡಗಳು ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವ ಮೂಲಕ ಜಿಲ್ಲಾ ವ್ಯಾಪ್ತಿಯ 1.33 ಲಕ್ಷ ಮನೆಗಳನ್ನು ತಲುಪಿ, 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕಲಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರತಿಯೊಬ್ಬರು ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ಸೂಚಿತ ದಿನಗಳಂದು ಸಮೀಪದ ಬೂತ್‍ಗಳಿಗೆ ಬಂದು ಪೋಲಿಯೋ ಹನಿಯನ್ನು ಹಾಕಿಸುವಂತೆ ಮನವಿ ಮಾಡಿದ ಡಾ. ರಾಜೇಶ್, ನಂತರದ ಎರಡು ದಿನಗಳ ಕಾಲ ಮನೆ ಮನೆಗಳಿಗೆ ಭೇಟಿ ನಿಡಿ, ಪೋಲಿಯೋ ಹನಿ ಹಾಕಿಸಿ ಕೊಳ್ಳದ ಮಕ್ಕಳನ್ನು ಗುರುತಿಸಿ ಅವರಿಗೆ ಪೋಲಿಯೋ ಹನಿ ಹಾಕಲಿದ್ದಾರೆ ಎಂದರು. ಜಿಲ್ಲಾ ವ್ಯಾಪ್ತಿಯ ಬಸ್ ನಿಲ್ದಾಣಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿನ ಪಲ್ಸ್ ಪೋಲಿಯೋ ಕೇಂದ್ರಗಳು ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿವೆ. ರೋಟರಿ, ಲಯನ್ಸ್, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರ್‍ಟಿಒ, ಕೆಎಸ್‍ಆರ್‍ಟಿಸಿ, ಪೊಲೀಸ್ ಇಲಾಖೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಬೃಹತ್ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುತ್ತಿವೆ ಎಂದು ತಿಳಿಸಿದರು.
ಡಾ. ಎಂ.ಎನ್. ನೀಲೇಶ್ ಮಾತನಾಡಿ, ತಾ. 28 ರಂದು ಎಲ್ಲಾ ಬೂತ್‍ಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪೋಲಿಯೋ ಹನಿ ಹಾಕಲಾಗುವದು. ಪೋಲಿಯೋ ಹನಿ ಹಾಕುವದರಿಂದ ಯಾವದೇ ಅಡ್ಡ ಪರಿಣಾಮಗಳು ಉಂಟಾಗುವದಿಲ್ಲ. ಹಾಗೊಂದು ವೇಳೆ ಪರಿಣಾಮ ಬೀರಿದಲ್ಲಿ ತಕ್ಷಣ ಸ್ಥಳೀಯ ಆರೋಗ್ಯ ಕೇಂದ್ರÀ್ರಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದರು. ಕಳೆದ ಬಾರಿ ಶೇ. 106 ರಷ್ಟು ಪೋಲಿಯೋ ಹನಿ ಸಾಧನೆ ಮಾಡಿದ್ದು, ಈ ಬಾರಿ ಕೂಡ ಶೇ. 100 ನ್ನು ಮೀರಿ ಸಾಧನೆ ಮಾಡುವದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಕುಟುಂಬ ಕಲ್ಯಾಣ ಇಲಾಖೆಯ ಡಾ. ಆನಂದ, ರೋಟರಿ ಮಡಿಕೇರಿಯ ಪಲ್ಸ್ ಪೋಲಿಯೋ ಅಭಿಯಾನದ ಅಧ್ಯಕ್ಷ ಅಜಯ್ ಸೂದ್ ಹಾಗೂ ಲಯನೆಸ್‍ನ ಕನ್ನಂಡ ಕವಿತ ಬೊಳ್ಳಪ್ಪ ಉಪಸ್ಥಿತರಿದ್ದರು.