*ಗೋಣಿಕೊಪ್ಪಲು, ಜ. 26: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾ ಘಟಕ ಮತ್ತು ಸ್ತ್ರೀ ಶಕ್ತಿ ಗೊಂಚಲು, ತಿತಿಮತಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಆದಾಯ ಉತ್ಪನ್ನಗಳ ತಯಾರಿಕಾ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಕಾವೇರಿ ಕಾಲೇಜಿನ ಉಪನ್ಯಾಸಕÀ ಅಕ್ರಂ, ಮಹಿಳಾ ಸಬಲೀಕರಣ ಹೆಚ್ಚು ಒತ್ತು ನೀಡಿದ್ದು ಮಹಿಳೆಯರಿಗೆ ವಿವಿಧ ರೀತಿಯ ಕೌಶಲ್ಯಾಧಾರಿತ ತರಬೇತಿಗಳನ್ನು, ಮಾರ್ಗದರ್ಶನಗಳ ಕಾರ್ಯಾಗಾರ ವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮಾರುಕಟ್ಟೆಯ ಹೊಂದಾಣಿಕೆ, ಕೌಶಲ್ಯಾಭಿವೃದ್ಧಿ, ವೃತ್ತಿಪರ ತರಬೇತಿ, ಸ್ವ-ಉದ್ಯೋಗ, ಮಾರ್ಗದರ್ಶನ, ಮಹಿಳಾ ಅಭಿವೃದ್ಧಿ ಯೋಜನೆಗಳು ಇಂತಹ ಕಾರ್ಯಾಗಾರಗಳ ಮೂಲಕ ಪರಿಣಾಮಕಾರಿ ಯಾಗಬೇಕು ಎಂದರು.
ಇಂದು ಮಾಹಿತಿಯ ಕೊರತೆಯಿಂದ ಹಳ್ಳಿಗಳಲ್ಲಿ ಸ್ತ್ರೀ ಶಕ್ತಿ ಒಕ್ಕೂಟಗಳಿಗೆ ಬಹಳಷ್ಟು ಸವಲತ್ತುಗಳು ಲಭಿಸುತ್ತಿಲ್ಲ.
ಸರ್ಕಾರಗಳು, ಸಂಘ-ಸಂಸ್ಥೆಗಳು ಈ ನಿಟ್ಟಿನಲ್ಲಿ ಹಳ್ಳಿ-ಹಳ್ಳಿಗಳಲ್ಲಿಯೂ ತರಬೇತಿ ಕಾರ್ಯಾಗಾರವನ್ನು ಸ್ತ್ರೀ ಶಕ್ತಿ ಒಕ್ಕೂಟಗಳ ಆಶ್ರಯದಲ್ಲಿ ಹಮ್ಮಿಕೊಳ್ಳುವ ಅವಶ್ಯಕತೆ ಇದೆ.. ಅಬಲೆ ಯಿಂದ ಸಬಲೆ, ಸಂಘಟನೆ ಯಿಂದ ಸಾಕ್ಷರತೆ, ಸಾಮಥ್ರ್ಯದಿಂದ ಸ್ವಾವಲಂಬನೆ, ಸ್ವಾವಲಂಬನೆಯಿಂದ ಸಮಾನತೆ, ಸಮಾನತೆಯಿಂದ ಸಮೃದ್ಧಿ ಎನ್ನುವ ಹಾಗೆ ಪ್ರತಿಯೊಂದು ಸ್ತ್ರೀ ಶಕ್ತಿ ಗುಂಪುಗಳು ಪಾಲ್ಗೊಳ್ಳುವ ಅವಶ್ಯಕತೆ ಇದೆ.
ಇಂದು ವಿವಿಧ ರೀತಿಯ ವೃತ್ತಿಪರ ಯೋಜನೆಗಳಿಗೆ ಸರ್ಕಾರವು ಇಲಾಖೆಯ ಮೂಲಕ ಆರ್ಥಿಕ ಸವಲತ್ತುಗಳನ್ನು ನೀಡುತ್ತಿದ್ದು ಇದು ಮತ್ತಷ್ಟು ಹೆಚ್ಚಾಗಬೇಕಾಗಿದೆ ಎಂದು ತಿಳಿಸಿದರು.
ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯದ ಅವಶ್ಯಕತೆಯೂ ಇದೆ. ಇಂದು ಸಾಲ ಪಡೆಯಬೇಕಾದರೆ ಹಲವಷ್ಟು ಮಾಹಿತಿಗಳನ್ನು ನೀಡಬೇಕಾಗಿದ್ದು, ಇದರಿಂದಾಗಿ ಗ್ರಾಮೀಣ ಭಾಗದ ಜನರು ಬ್ಯಾಂಕ್ಗಳಿಗೆ ಹೋಗಲು ಹಿಂಜರಿಯುತ್ತಾರೆ. ಸುಲಭ ಹಾಗೂ ಕಡಿಮೆ ಬಡ್ಡಿದರದಲ್ಲಿ ಸಹಕಾರ ಬ್ಯಾಂಕ್ಗಳಿರಬಹುದು, ಇನ್ನಿತರ ಸಂಘ-ಸಂಸ್ಥೆಗಳ ಮೂಲಕ ಆರ್ಥಿಕ ಸಹಾಯವನ್ನು ನೀಡಬೇಕಾಗಿದ್ದು ಹಾಗಾದರೆ ಮಾತ್ರ ಮಹಿಳಾ ಸಬಲೀಕರಣ ಎನ್ನುವ ಮಾತು ಯಶಸ್ವಿಯಾಗಲು ಸಾಧ್ಯ.
ಕರ್ನಾಟಕದಲ್ಲಿ 6 ಲಕ್ಷಕ್ಕಿಂತ ಮೇಲ್ಪಟ್ಟು ಸ್ತ್ರೀ ಶಕ್ತಿ ಗುಂಪುಗಳಿದ್ದು, 20 ಲಕ್ಷಕ್ಕಿಂತ ಮೇಲ್ಪಟ್ಟು ಸದಸ್ಯರಿದ್ದು, ಇವರುಗಳಿಗೆ ಪರಿಣಾಮಕಾರಿ ಯಾಗುವ ರೀತಿಯಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಹಾಗೂ ಕಾರ್ಯಾಗಾರವನ್ನು ಹಮ್ಮಿಕೊಂಡರೆ ಮತ್ತಷ್ಟು ಯಶಸ್ವಿಯಾಗಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿಯ ಅಧ್ಯಕ್ಷರಾದ ಎಂ.ಎಸ್. ರಜನಿ ವಹಿಸಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮತ್ತು ಸ್ತ್ರೀ ಶಕ್ತಿ ಒಕ್ಕೂಟದ ಕಾರ್ಯದರ್ಶಿ ಸೀತಾಲಕ್ಷ್ಮಿ, ಸಹ ಕಾರ್ಯದರ್ಶಿ ರತ್ನ, ಪದಾಧಿಕಾರಿಗಳಾದ ಸುಜಾತ, ದೇವಯಾನಿ, ಶಾರದ, ಹಾಜಿರ ಹಾಜರಿದ್ದರು.