ವೀರಾಜಪೇಟೆ, ಜ. 26: ವಿಶ್ವದ ಅನೇಕ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಭದ್ರ ಹಾಗೂ ಸುರಕ್ಷಿತ ಮೌಲ್ಯಯುತ ಪ್ರಜಾಪ್ರಭುತ್ವ ಸಂವಿಧಾನವನ್ನು ಹೊಂದಿರುವ ಭಾರತ ಗಣರಾಜ್ಯ ವ್ಯವಸ್ಥೆಯಲ್ಲಿ ಮುನ್ನಡೆಯನ್ನು ಸಾಧಿಸಿದೆ. ಭಾರತದ ಪ್ರತಿಯೊಬ್ಬ ಪ್ರಜೆಗೂ ಪ್ರಜಾಪ್ರಭುತ್ವದ ಸಂವಿಧಾನದಲ್ಲಿ ಮುಕ್ತವಾಗಿ ಮೂಲ ಭೂತ ಸೌಲಭ್ಯಗಳನ್ನು ಕಲ್ಪಿಸಿರುವದು ಶ್ಲಾಘನೀಯ ಎಂದು ವೀರಾಜಪೇಟೆ ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜ್ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಆಡಳಿತ ವತಿಯಿಂದ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಗಣರಾಜ್ಯ ವ್ಯವಸ್ಥೆಯಲ್ಲಿ ರಾಷ್ಟ್ರಪತಿ ಸಾರ್ವಭೌಮರು. ಸಂಸತ್ತು ಅಂಗೀಕರಿಸುವ ಮಸೂದೆಗಳಿಗೆ ಸಮ್ಮತಿ ಸೂಚಿಸುವ, ಸಂಸತ್ತಿನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವ ಹಾಗೂ ಸುಗ್ರೀವಾಜ್ಞೆ ಯನ್ನು ಹೊರಡಿಸುವ ಅಧಿಕಾರವನ್ನು ಹೊಂದಿದ್ದಾರೆ. (ಮೊದಲ ಪುಟದಿಂದ) ಸಂಸತ್ತು ಅಂಗೀಕರಿಸಿದ ಮಸೂದೆಯನ್ನು ತಡೆಹಿಡಿಯುವ ಅಧಿಕಾರ ಸೇರಿದಂತೆ ಪ್ರಧಾನಮಂತ್ರಿಗಳ ಸಲಹೆಯಂತೆ ನಡೆದುಕೊಳ್ಳುತ್ತಾರೆ ಎಂಬದು ಮಹತ್ವದ ಸಂಗತಿಯಾಗಿದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ವಹಿಸಿದ್ದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್, ಉಪಾಧ್ಯಕ್ಷೆ ತಸ್ನಿಂ ಅಕ್ತರ್, ಕಾಂತಿ ಸತೀಶ್, ಡಿವೈಎಸ್‍ಪಿ ನಾಗಪ್ಪ, ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ, ಪ್ರಭಾರ ತಹಶೀಲ್ದಾರ್ ತ್ರಿನೇತ್ರ, ತೂಕ್‍ಬೊಳಕ್ ಕಲೆ ಮತ್ತು ಕ್ರೀಡೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೊನ್ನಪ್ಪ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕಾಶಿ ಕಾವೇರಪ್ಪ, ಮತ್ತಿತರರು ಉಪಸ್ಥಿತರಿದ್ದರು.

ನಗರ ಠಾಣಾಧಿಕಾರಿ ಸಂತೋಷ್ ಕಶ್ಯಪ್ ನೇತೃತ್ವದಲ್ಲಿ ಪೊಲೀಸ್ ಸ್ಕೌಟ್ಸ್, ಗೈಡ್ಸ್, ಎನ್‍ಸಿಸಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು, ತಹಶೀಲ್ದಾರ್ ಆರ್. ಗೋವಿಂದರಾಜ್ ಗೌರವ ವಂದನೆ ಸ್ವೀಕರಿಸಿದರು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ತೂಕ್ ಬೊಳಕ್ ಕಲೆ ಮತ್ತು ಕ್ರೀಡೆ ಅಕಾಡಮಿ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ವಿವಿಧ ಶಾಲೆಗಳಿಗೆ ಆಯೋಜಿಸಲಾಗಿದ್ದ ಸ್ಥಬ್ಧ ಚಿತ್ರಗಳಲ್ಲಿ ವೀರಾಜಪೇಟೆ ಮೌಂಟನ್ ವ್ಯೂ (ಪ್ರ), ರೋಟರಿ ಪ್ರೌಢಶಾಲೆ ಬಿಟ್ಟಂಗಾಲ (ದ್ವಿ), ಏಕಲವ್ಯ ವಸತಿಶಾಲೆ ಬಾಳುಗೋಡು (ತೃ) ಸ್ಥಾನ ಪಡೆದುಕೊಂಡರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸ್ವಾಗತಿಸಿದರು. ಶಿಕ್ಷಕ ದೇವರ್ ವಂದಿಸಿದರು.

ಸಮಾರಂಭಕ್ಕೆ ಮುನ್ನ ಶಾಲಾ ಕಾಲೇಜು ಮಕ್ಕಳಿಂದ ಸ್ತಬ್ಧಚಿತ್ರಗಳ ಸಮೇತ ಮೆರವಣಿಗೆ ಮುಖ್ಯ ಬೀದಿಗಳಲ್ಲಿ ನಡೆಯಿತು.