ಸೋಮವಾರಪೇಟೆ, ಜ. 26: ಭಾರತೀಯ ಸಂವಿಧಾನ ರಚನೆಯಾದ ಸಂತೋಷದ ನಡುವೆಯೂ ಇಂದಿಗೂ ಸಮಾಜದಲ್ಲಿ ಬೇರುಬಿಟ್ಟಿರುವ ಬಡತನ, ನಿರುದ್ಯೋಗ, ಅನಕ್ಷರತೆ, ಜನಸಂಖ್ಯಾಸ್ಫೋಟ, ಭ್ರಷ್ಟಾಚಾರ, ಭಯೋತ್ಪಾದನೆ, ಕೋಮುವಾದ, ಪ್ರಾಂತೀಯವಾದದಂತಹ ಘನಘೋರ ಸಮಸ್ಯೆಗಳ ಸಂಪೂರ್ಣ ನಿವಾರಣೆಗೆ ಎಲ್ಲರೂ ಕಟಿಬದ್ಧರಾಗಬೇಕಿದೆ ಎಂದು ತಾಲೂಕು ತಹಶೀಲ್ದಾರ್ ಪಿ.ಎಸ್. ಮಹೇಶ್ ಕರೆ ನೀಡಿದರು.

ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ 69ನೇ ಗಣ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಗಣರಾಜ್ಯೋತ್ಸವ ಸಂದೇಶ ನೀಡಿದರು.

ಬಡತನ, ನಿರುದ್ಯೋಗ ನಿವಾರಣೆ ಗಾಗಿ ಹಲವಾರು ಜನಕಲ್ಯಾಣ ಯೋಜನೆಗಳು ಸ್ವಾತಂತ್ರ್ಯದ ನಂತರ ಜಾರಿಗೆ ಬಂದಿದೆ. ರೈತರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರಗಳು ವೈಜ್ಞಾನಿಕ ಯೋಜನೆಗಳನ್ನು ಜಾರಿಗೆ ತರಬೇಕಿದೆ. ಅನ್ನದಾತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕಾಗಿದೆ. ಮಕ್ಕಳಲ್ಲಿ ದೇಶಪ್ರೇಮ ಮೂಡಿಸುವ ಕೆಲಸವಾಗಬೇಕಿದೆ ಎಂದರು.

(ಮೊದಲ ಪುಟದಿಂದ) ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪರಾಜೇಶ್ ಮಾತನಾಡಿ, ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಭಾರತ ದೇಶದಲ್ಲಿ ವಿವಿಧ ಧರ್ಮ, ವಿವಿಧ ಭಾಷೆಗಳನ್ನು ಮಾತನಾಡುವ ಜನರಿದ್ದರೂ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ದೇಶ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಸೈನಿಕರ ತ್ಯಾಗ ಬಲಿದಾನವನ್ನು ಸದಾ ಗೌರವಿಸಬೇಕು ಎಂದರು.

ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್, ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ಪಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್, ತಾಪಂ ಸದಸ್ಯೆ ತಂಗಮ್ಮ, ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್.ನಾಗರಾಜಯ್ಯ ಸ್ವಾಗತಿಸಿ, ಜೂನಿಯರ್ ಕಾಲೇಜು ಪ್ರಾಂಶುಪಾಲ ಕೆ.ಎಂ.ಚಂದ್ರಶೇಖರ್ ವಂದಿಸಿದರು. ಮುಖ್ಯ ಶಿಕ್ಷಕಿ ಅಣ್ಣಮ್ಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಜೈ ಜವಾನ್ ಮಾಜಿ ಸೈನಿಕರ ಸಂಘ, ಪೊಲೀಸ್ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್, ಗೃಹರಕ್ಷಕ ದಳ, ಸಾಂದೀಪನಿ, ಕುವೆಂಪು, ಸಂತ ಜೋಸೆಫರ ಪ್ರೌಢಶಾಲೆ, ಓಎಲ್‍ವಿ, ಜ್ಞಾನವಿಕಾಸ, ವಿದ್ಯಾರ್ಥಿ ಪೊಲೀಸ್ ಘಟಕಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.

ಮಾಜಿ ಸೈನಿಕ ಅಭಿಮಠ ಬಾಚಳ್ಳಿ ಗ್ರಾಮದ ಎ.ಕೆ.ಮಾಚಯ್ಯ ಅವರನ್ನು ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಕೇಂದ್ರ ಸರ್ಕಾರದ ಸ್ವಚ್ಛ್‍ಭಾರತ್ ಯೋಜನೆಯಿಂದ ನೀಡಲಾಗುವ ‘ಸ್ವಚ್ಚ ವಿದ್ಯಾಲಯ’ ಪ್ರಶಸ್ತಿಯನ್ನು ಮಾದಾಪುರ ಡಿ.ಚನ್ನಮ್ಮ ಶಾಲೆ, ಸುಂಟಿಕೊಪ್ಪದ ಸರ್ಕಾರಿ ಪದವಿ ಪೂರ್ವ ಕಾಲೇಜು, ಗರಗಂದೂರು ಜಿಎಚ್‍ಪಿ ಶಾಲೆ, ಗೋಣಿಮರೂರಿನ ಜಿಎಚ್‍ಪಿ ಶಾಲೆ ಹಾಗೂ ವಿಶ್ವಮಾನವ ಕುವೆಂಪು ಶಾಲೆಗಳಿಗೆ ವಿತರಿಸಲಾಯಿತು.

ಗಣರಾಜ್ಯೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಸಾಂಸ್ಕøತಿಕ ಸ್ಪರ್ಧೆಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಮಸಗೋಡು ಚನ್ನಮ್ಮ ಪ್ರಾಥಮಿಕ ಶಾಲೆ ಪ್ರಥಮ, ಓಎಲ್‍ವಿ ದ್ವಿತೀಯ, ಸೋಮವಾರಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ತೃತೀಯ ಸ್ಥಾನ ಗಳಿಸಿತು.

ಪ್ರೌಢಶಾಲಾ ವಿಭಾಗದಲ್ಲಿ ಒಕ್ಕಲಿಗರ ಸಂಘದ ಕುವೆಂಪು ಶಾಲೆ ಪ್ರಥಮ, ಸಂತ ಜೋಸೆಫರ ಶಾಲೆ ದ್ವಿತೀಯ, ಎಸ್‍ಜೆಎಂ ಬಾಲಿಕಾ ಶಾಲೆ ತೃತೀಯ ಸ್ಥಾನ ಗಳಿಸಿತು. ಕಾಲೇಜು ವಿಭಾಗದಲ್ಲಿ ಜೂನಿಯರ್ ಕಾಲೇಜು ಪ್ರಥಮ ಸ್ಥಾನಗಳಿಸಿತು.