ಮಡಿಕೇರಿ, ಜ. 26: ಅಖಂಡ ಭಾರತ ಗಣತಂತ್ರ ವ್ಯವಸ್ಥೆಯಡಿ ಏಕೀಕರಣಗೊಂಡ ಸಂಭ್ರಮವನ್ನು ಗಣರಾಜ್ಯೋತ್ಸವವನ್ನಾಗಿ ನಾಡಿನಾದ್ಯಂತ ಸಂಭ್ರಮೋಲ್ಲಾಸ ದಿಂದ ಆಚರಿಸಲಾಗಿದೆ.ಜಿಲ್ಲೆಯಲ್ಲೂ ಕೂಡ ಸರಕಾರಿ ಕಚೇರಿ ಶಾಲೆ, ಸಂಘ-ಸಂಸ್ಥೆಗಳ ವತಿಯಿಂದ ಆಚರಿಸಲಾಗಿದೆ. ಕೆಲವು ಕಡೆ ಆಚರಣೆಯಲ್ಲಿ ಅವಾಂತರ ಗಳಾಗಿದ್ದರೆ, ಕುಶಾಲನಗರದಂತಹ ಮುಂದುವರಿಯುತ್ತಿರುವ ಪಟ್ಟಣದಲ್ಲಿ ಆಚರಣೆಯೇ ಸ್ಥಗಿತಗೊಂಡಿರುವದು ವಿಪರ್ಯಾಸವೇ ಸರಿ.

ಸುಂಟಿಕೊಪ್ಪ: ಇಲ್ಲಿಗೆ ಸಮೀಪದ ಮಾದಾಪುರ ಗ್ರಾಮ ಪಂಚಾಯಿತಿ ಯಲ್ಲಿ ಗ್ರಾಮದ ಪ್ರಥಮ ಪ್ರಜೆಯಾಗಿ ರುವ ಪಂಚಾಯಿತಿ ಅಧ್ಯಕ್ಷರಿಗೂ ತಿಳಿಯದಂತೆ ಕೆಲವು ಸಿಬ್ಬಂದಿಗಳೇ ಸೇರಿಕೊಂಡು ಬೆಳ್ಳಂಬೆಳಿಗ್ಗೆ ಧ್ವಜಾರೋಹಣ ಮಾಡಿ ಕಚೇರಿಗೆ ಬೀಗ ಜಡಿದು ತೆರಳಿರುವ ಪ್ರಸಂಗ ನಡೆದಿದೆ.

ಎಲ್ಲಾ ಗ್ರಾ.ಪಂ.ಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವವನ್ನು ಸರಕಾರಿ ಕಾರ್ಯಕ್ರಮವಾಗಿ ಆದ್ದೂರಿಯಿಂದ ಆಚರಿಸಲಾಗುತ್ತದೆ. ಆದರೆ ಮಾದಾಪುರ ಗ್ರಾ.ಪಂ.ಯಲ್ಲಿ ಇಂದು ಬೆಳಿಗ್ಗೆ 6 ಗಂಟೆಗೆ ಗ್ರಾ.ಪಂ. ಪಿಡಿಓ ಅನುಪಸ್ಥಿತಿಯಲ್ಲಿ ಸಿಬ್ಬಂದಿ ಗಳಾದ ಕಂಪ್ಯೂಟರ್ ಅಪರೇಟರ್ ರವಿ, ಬಿಲ್ ಕಲೆಕ್ಟರ್ ಪ್ರೀತಿ ಹಾಗೂ ಪೌರಕಾರ್ಮಿಕ ಗಣೇಶ ಅವರು ಮಾಮೂಲಿಯಂತೆ ರಾಷ್ಟ್ರಧ್ವಜಾ ರೋಹಣ ಮಾಡಿ ಮನೆಗೆ ತೆರಳಿದ್ದಾರೆ.

ಗ್ರಾ.ಪಂ. ಅಧ್ಯಕ್ಷೆ ಲತಾ ನಾಗರಾಜು, ಉಪಾಧ್ಯಕ್ಷ ಭಾರತಿ, ಸದಸ್ಯರುಗಳಾದ ಸೋಮಪ್ಪ, ಪ್ರಸನ್ನ, ಮಜೀದ್, ನಾಪಂಡ ಉಮೇಶ್, ಕೆ.ಎ. ಲತೀಫ್, ಭಾಗೀರಥಿ, ಶಾಂತ, ಪ್ರೇಮ, ನಂಜಾಮಣಿ ಗಣೇಶ, ಎಂ.ಸಿ. ಶಾಂತಿ, ಪ್ರಕಾಶ, ಬೆಳ್ಯಪ್ಪ, ಅವರುಗಳು ಬೆಳಿಗ್ಗೆ 9 ಗಂಟೆಗೆ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದಾಗ ದಿಗ್ಭ್ರಮೆ ಕಾದಿತ್ತು. ಧ್ವಜಾರೋಹಣ ಮಾಡಲಾಗಿತ್ತು. ಪಂಚಾಯಿತಿ ಕಚೇರಿಗೆ ಬೀಗ ಹಾಕಲಾಗಿತ್ತು. ಈ ಬಗ್ಗೆ ಸೋಮಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ತಾ.ಪಂ. ಇಓ ಅವರನ್ನು ದೂರವಾಣಿ ಮುಖಾಂತರ ಮಾತನಾಡಿಸಿದ ಮೇರೆ ಅವರು ಮಾದಾಪುರಕ್ಕೆ ಬಂದು ಮಾಹಿತಿ ಕಲೆ ಹಾಕಿದಲ್ಲದೆ, ಪಿಡಿಓ ರಜೆಯಲ್ಲಿದ್ದಾರೆ; ಜಿ.ಪಂ. ಸಿಇಓ ಅವರನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕಿಕೊಂಡು. ರಾಷ್ಟ್ರೀಯ ಹಬ್ಬ ಆಚರಣಾ ಸಮಿತಿಯ ಶಿಷ್ಟಾಚಾರ ವನ್ನು ಉಲ್ಲಂಘಿಸಿದ ಸಿಬ್ಬಂದಿಗಳ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದ್ದಾರೆ.

ಕುಶಾಲನಗರ: ದೇಶದ ಎಲ್ಲೆಡೆ ಗಣರಾಜ್ಯೋತ್ಸವ ಸಂಭ್ರಮ ನಡೆಯುತ್ತಿದ್ದರೆ ಕುಶಾಲನಗರದಲ್ಲಿ ಮಾತ್ರ ಕಳೆದ 17 ವರ್ಷಗಳಿಂದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದುಕೊಂಡು ಬರುತ್ತಿದ್ದ ಅದ್ದೂರಿ ರಾಷ್ಟ್ರೀಯ ಹಬ್ಬ ಕಾರ್ಯಕ್ರಮ ಮಾತ್ರ ದಿಢೀರನೆ ರದ್ದುಗೊಂಡು ಸಾವಿರಾರು ಮಕ್ಕಳು, ಪೋಷಕರು ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ನಿರಾಸೆ ಉಂಟುಮಾಡಿದೆ.

ಪ.ಪಂ. ಉಸ್ತುವಾರಿಯಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಹಬ್ಬಗಳ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಜಿಲ್ಲಾಧಿಕಾರಿಗಳಿಗೆ ಬರೆದ ಮೂಗರ್ಜಿಯಿಂದ ಈ ಕಂಟಕ ಉಂಟಾಗಿದೆ ಎನ್ನುವ ಅಂಶ ಹೊರಬಿದ್ದಿದೆ. ರಾಷ್ಟ್ರೀಯ ಹಬ್ಬಗಳ ದಿನಗಳಾದ ಆಗಸ್ಟ್ 15, ಜನವರಿ 26 ರಂದು ಸ್ಥಳೀಯ ನೂರಕ್ಕೂ ಅಧಿಕ ಸಂಘಸಂಸ್ಥೆಗಳು ಒಗ್ಗೂಡಿ ಸಂಭ್ರಮದಿಂದ ಆಚರಿಸುತ್ತಿದ್ದ ರಾಷ್ಟ್ರೀಯ ಹಬ್ಬಗಳಿಗೆ ಈ ಪತ್ರ ಕಂಟಕಪ್ರಾಯವಾಗಿ ಪರಿಣಮಿಸಿದೆ ಎನ್ನಲಾಗಿದೆ.

ಕಳೆದ 17 ವರ್ಷಗಳಿಂದ ಕುಶಾಲನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಸಂದೇಶ ಪಡೆಯುವ ಅವಕಾಶ ಹೊಂದಿದ್ದ ಸುಮಾರು 7 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಬಾರಿಯ ಗಣರಾಜ್ಯೋತ್ಸವ ಸಮಾರಂಭದ ಸಂಭ್ರಮದಿಂದ ವಂಚಿತರಾಗಿದ್ದಾರೆ. ಕಾರಣ ಡಿಸೆಂಬರ್ ತಿಂಗಳಲ್ಲಿ ಕೊಡಗು ಜಿಲ್ಲಾಧಿಕಾರಿಗಳ ಕಾರ್ಯಾಲ ಯದಿಂದ ಸ್ಥಳೀಯ ಪ.ಪಂ.ಗೆ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಬಗ್ಗೆ ಬಂದ ಶೋಕಾಸ್ ನೋಟಿಸ್ ಹಬ್ಬಗಳ ಸಮಿತಿಯನ್ನು ವಿಸರ್ಜಿಸು ವಂತೆ ಮಾಡಲು ಕಾರಣವಾಗಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

ಅನಾಮಿಕನೊಬ್ಬ ಜಿಲ್ಲಾಧಿಕಾರಿ ಗಳಿಗೆ ಮೂಗರ್ಜಿಯೊಂದನ್ನು ಬರೆದಿದ್ದು ರಾಷ್ಟ್ರೀಯ ಹಬ್ಬ ಆಚರಣೆ ಹೆಸರಿನಲ್ಲಿ ಪ.ಪಂ. ಮುಖ್ಯಾಧಿಕಾರಿ ಗುತ್ತಿಗೆದಾರರಿಂದ, ಕಟ್ಟಡ ಮಾಲೀಕ ರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಇವರ ಮೇಲೆ ಕ್ರಮಕೈಗೊಳ್ಳಿ ಎನ್ನುವ ದೂರು ಸಲ್ಲಿಸಿದ್ದಾನೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಯೋಜನಾ ನಿರ್ದೇಶಕರು ಪಂಚಾಯಿತಿ ಅಧಿಕಾರಿಗಳಿಗೆ ಕಾರಣ ಕೇಳುವ ನೋಟಿಸ್ ನೀಡಿದ್ದು ಈ ಎಲ್ಲಾ ಕಾರಣಗಳೊಂದಿಗೆ ಕಳೆದ 3 ವರ್ಷಗಳಿಂದ ರಾಷ್ಟ್ರೀಯ ಹಬ್ಬಗಳ ಆಚರಣೆ ಉಸ್ತುವಾರಿ ಹೊತ್ತಿದ್ದ ಪಟ್ಟಣ ಪಂಚಾಯಿತಿ ಆಡಳಿತ ಸಮಿತಿಯನ್ನು ವಿಸರ್ಜಿಸಿದೆ. ಯಾವದೇ ಸಂಘ ಸಂಸ್ಥೆಗಳು ಮುಂದೆ ಬಾರದ ಹಿನ್ನೆಲೆಯಲ್ಲಿ ಸಾಮೂಹಿಕವಾಗಿ ಆಚರಿಸುತ್ತಿದ್ದ ಈ ಬಾರಿಯ ಗಣರಾಜ್ಯೋತ್ಸವ ಸಮಾರಂಭ ದಿಢೀರನೆ ರದ್ದುಗೊಂಡಿದೆ.

2000ನೇ ಇಸವಿಯಿಂದ 14 ವರ್ಷಗಳ ಕಾಲ ಸ್ಥಳೀಯ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ 75ಕ್ಕೂ ಅಧಿಕ ಸಂಘಸಂಸ್ಥೆಗಳು ಸೇರಿ ದಾನಿಗಳ ಸಹಕಾರದೊಂದಿಗೆ ಅದ್ದೂರಿಯಾಗಿ ರಾಷ್ಟ್ರೀಯ ಹಬ್ಬಗಳ ಆಚರಣೆ ನಡೆಸಿಕೊಂಡು ಬರುತಿತ್ತು. ಕೆಲವು ಕಾರಣಗಳಿಂದ ಸಮಿತಿಯ ಉಸ್ತುವಾರಿಯನ್ನು ಪ.ಪಂ.ಗೆ ಹಸ್ತಾಂತರಿಸಲಾಗಿತ್ತು. ತದನಂತರದಲ್ಲಿ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರಿನ ಬೆಳವಣಿಗೆ ಹಿನ್ನೆಲೆಯಲ್ಲಿ ಇದೀಗ ಸಂಭ್ರಮದಿಂದ ನಡೆಯುತ್ತಿದ್ದ ರಾಷ್ಟ್ರೀಯ ಹಬ್ಬ ಆಚರಣೆ ಕಾರ್ಯ ಕ್ರಮಗಳಿಗೆ ತಾಂತ್ರಿಕ ಅಡ್ಡಿ ಉಂಟಾಗು ವದರೊಂದಿಗೆ ಸಾವಿರಾರು ವಿದ್ಯಾರ್ಥಿಗಳಿಗೆ ರಾಷ್ಟ್ರಪ್ರೇಮ ಮೂಡಿಸುತ್ತಿದ್ದ ಸಮಾರಂಭವೊಂದು ದಿಢೀರನೆ ರದ್ದುಗೊಂಡಿರುವದು ಕುಶಾಲನಗರದ ಸುತ್ತಮುತ್ತಲ ಜನತೆಯಲ್ಲಿ ನಿರಾಸೆ ಉಂಟುಮಾಡಿದೆ.

ಹೆಗ್ಗಳ: ವೀರಾಜಪೇಟೆ ಬಳಿಯ ಹೆಗ್ಗಳ ಪ್ರಾಥಮಿಕ ಶಾಲೆಯೊಂದರಲ್ಲಿ ಬೆಳಿಗ್ಗೆ ಹಾರಿಸಿದ ರಾಷ್ಟ್ರಧ್ವಜ ಮಧ್ಯಾಹ್ನದ ವೇಳೆಗೆ ಅರ್ಧಕ್ಕೆ ಇಳಿದಿದೆ. ಧ್ವಜವನ್ನು ಸರಿಯಾಗಿ ಕಟ್ಟದೇ ಇರುವದರಿಂದ ಜಾರಿಕೊಂಡು ಬಂದು ಅರ್ಧಕ್ಕೆ ನಿಂತಿದೆ. ಸಾಮಾನ್ಯವಾಗಿ ರಾಷ್ಟ್ರ, ರಾಜ್ಯ ನಾಯಕರುಗಳು ಸಾವನ್ನಪ್ಪಿದರೆ ಶೋಕಾಚರಣೆಗಾಗಿ ಅರ್ಧಕ್ಕೆ ಧ್ವಜ ಹಾರಿಸಲಾಗುತ್ತದೆ. ಶಾಲಾ ಶಿಕ್ಷಕರ ಬೇಜವಾಬ್ದಾರಿಯಿಂದಾಗಿ ಈ ರೀತಿಯ ಅವಾಂತರ ಸೃಷ್ಟಿಯಾಗಿದೆ.

ತಲೆಕೆಳಗಾದ ಧ್ವಜ

ವೀರಾಜಪೇಟೆ: ಇಲ್ಲಿನ ಕರ್ನಾಟಕ ಸಂಘದ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ನೆರವೇರಿಸಿದ ಧ್ವಜಾರೋಹಣ ತಲೆ ಕೆಳಗಾಗಿದ್ದು, ಸಂಘದ ಪದಾಧಿಕಾರಿಗಳಿಗೆ ಅರಿವಿಗೆ ಬಂದ ತಕ್ಷಣ ಸರಿಪಡಿಸಲಾಯಿತು.