ವೀರಾಜಪೇಟೆ, ಜ. 26: ಮಂಗಳೂರು ವಿಶ್ವವಿದ್ಯಾಲಯದ ಅಧೀನದಲ್ಲಿರುವ ಜಿಲ್ಲೆಯ ಅಂತರ ಕಾಲೇಜುಗಳ ಮಹಿಳೆಯರ ಜಿಲ್ಲಾಮಟ್ಟದ ದ್ವಿತೀಯ ವರ್ಷದ ಗ್ರಾಮೀಣ ಕ್ರೀಡಾಕೂಟವನ್ನು ವೀರಾಜಪೇಟೆ ಕಾವೇರಿ ಕಾಲೇಜು ಮತ್ತು ಹಳೇ ವಿದ್ಯಾರ್ಥಿಗಳ ಒಕ್ಕೂಟದಿಂದ ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ತಾ. 29 ರಂದು ಆಯೋಜಿಸಲಾಗಿದೆ ಎಂದು ಕಾವೇರಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಸಿ.ಎಂ ನಾಚಪ್ಪ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಾಕಿ, ವಾಲಿಬಾಲ್, ಕಬಡ್ಡಿ ಮತ್ತು ಥ್ರೋಬಾಲ್‍ಗಳಂತಹ ಕ್ರೀಡೆಗಳನ್ನು ವೀರಾಜಪೇಟೆಯಲ್ಲಿ ನಡೆಸಲಾಗುತ್ತಿದೆ. ಜಿಲ್ಲೆಯ 14 ಕಾಲೇಜುಗಳು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿವೆ ಎಂದು ಹೇಳಿದರು. ಕ್ರೀಡಾಕೂಟದ ಸಂಚಾಲಕಿ ಡಾ ಎಂ.ಎಂ. ದೇಚಮ್ಮ ಮಾತನಾಡಿ, ಕ್ರೀಡಾಕೂಟದ ಉದ್ಘಾಟನೆಯನ್ನು ಕಾವೇರಿ ಎಜುಕೇಷನ್ ಟ್ರಸ್ಟ್‍ನ ನಿರ್ದೇಶಕಿ ಡಾ. ಜೆ. ಪೊನ್ನಮ್ಮ ಮಾಚಯ್ಯ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಎ.ಎಸ್. ಈರಪ್ಪ, ಪ್ರೊ. ಕೆ.ಎಸ್. ಜ್ಯೋತಿ, ರೇಷ್ಮಾ ಅಪ್ಪಚ್ಚು, ಮಂಗಳೂರು ವಿಶ್ವ ವಿದ್ಯಾಲಯದ ದೈಹಿಕ ನಿರ್ದೇಶಕ ಡಾ. ಕಿಶೋರ್ ಕುಮಾರ್, ಕೆ.ಪಿ. ಬೋಪಣ್ಣ, ಪ್ರೊ. ನಾಚಪ್ಪ ಉಪಸ್ಥಿತರಿರುವರು. ಇದೇ ಸಂದರ್ಭ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಿದ ಹಳೇ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವದು ಎಂದು ಹೇಳಿದರು.

ಗೋಷ್ಠಿಯಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸೋಮಣ್ಣ, ಕ್ರೀಡಾಕೂಟದ ಸಹ ಸಂಚಾಲಕ ಎಂ.ಎ. ನಾಚಪ್ಪ ಉಪಸ್ಥಿತರಿದ್ದರು.