ಮಡಿಕೇರಿ, ಜ. 25: ತಾ. 30 ರಂದು ಹುತಾತ್ಮರ ದಿನಾಚರಣೆ ಹಿನ್ನೆಲೆ ಜಿಲ್ಲಾ ಖಜಾನೆಯಿಂದ ಚಿತಾಭಸ್ಮವನ್ನು ನಗರದ ಗಾಂಧಿ ಮೈದಾನದಲ್ಲಿರುವ ಗಾಂಧಿ ಪ್ರತಿಮೆ ಬಳಿಗೆ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಿ ಸರ್ವ ಧರ್ಮ ಪ್ರಾರ್ಥನೆಯೊಂದಿಗೆ ಗೌರವ ನಮನ ಸಲ್ಲಿಸುವ ಕಾರ್ಯಕ್ರಮದ ಬಗ್ಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಸರ್ವೋದಯ ಸಮಿತಿ ಸದಸ್ಯ ಕೋಡಿ ಚಂದ್ರಶೇಖರ ಮತ್ತು ಅಂಬೆಕಲ್ ನವೀನ್ ಅವರು ಚಿತಾಭಸ್ಮವನ್ನು ಜಿಲ್ಲಾ ಖಜಾನೆಯಿಂದ ನಗರದ ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಪೊಲೀಸ್ ಬ್ಯಾಂಡ್‍ನೊಂದಿಗೆ ಗಾಂಧಿ ಪ್ರತಿಮೆ ಬಳಿಗೆ ಮೆರವಣಿಗೆ ಮೂಲಕ ತೆರಳಬೇಕಿದೆ. ನಂತರ ಸರ್ವ ಧರ್ಮ ಪ್ರಾರ್ಥನೆಯೊಂದಿಗೆ ಗೌರವ ನಮನ ಸಲ್ಲಿಸಬೇಕಿದೆ ಎಂದು ತಿಳಿಸಿದರು.

ಅಂದು ಬೆಳಿಗ್ಗೆ 10 ಗಂಟೆಗೆ ಮೆರವಣಿಗೆ ಹೊರಡಬೇಕಿದೆ. ಬೆಳಿಗ್ಗೆ 11 ಗಂಟೆಗೆ ಸೈರನ್ ಮೊಳಗಿಸಬೇಕಿದೆ. ಆ ಸಂದರ್ಭದಲ್ಲಿ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಬೇಕಿದೆ ಎಂದು ಸರ್ವೋದಯ ಸಮಿತಿ ಸದಸ್ಯರು ಹೇಳಿದರು.

ಗಾಂಧಿ ಪ್ರತಿಮೆ ಆವರಣದಲ್ಲಿ ರಾಜ್‍ಘಾಟ್ ಮಾದರಿಯಲ್ಲಿ ಉದ್ಯಾನವನ ನಿರ್ಮಾಣ ಮಾಡಬೇಕಿದೆ. ಆ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಸರ್ವೋದಯ ಸಮಿತಿ ಸದಸ್ಯರು ತಿಳಿಸಿದರು. ಈ ಸಂಬಂಧ ಪರಿಶೀಲಿಸಿ ಕ್ರಮಕೈಗೋಳ್ಳಾಗುವದು ಎಂದು ಜಿಲ್ಲಾಧಿಕಾರಿ ಹೇಳಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಪ್ರೊಬೆಷನರಿ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಜಿಲ್ಲಾ ಖಜಾನಾಧಿಕಾರಿ ಸತೀಶ್, ಸರ್ವೋದಯ ಸಮಿತಿ ಸದಸ್ಯರಾದ ಸುಬ್ರಮಣ್ಯ, ಎಸ್.ಪಿ. ವಾಸುದೇವ, ಅಂಬೆಕಲ್ ಕುಶಾಲಪ್ಪ, ರಾಜೇಂದ್ರ, ರಾಮಯ್ಯ, ಜಿ.ಸಿ. ರಮೇಶ್, ದಮಯಂತಿ, ಸಂಪತ್ ಕುಮಾರ್, ನಗರಸಭೆಯ ರಮೇಶ್ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಇತರರು ಇದ್ದರು.