ಸುಂಟಿಕೊಪ್ಪ, ಜ. 25: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಯಲ್ಲಿ ಕೆಲ ಗ್ರಾಮ ಪಂಚಾಯಿತಿ ಸದಸ್ಯರುಗಳ ಅಸಹಕಾರ ಧೋರಣೆ ಯಿಂದ ಕಳೆದ 2 ತಿಂಗಳಿನಿಂದ ಸರಿಯಾಗಿ ಮಾಸಿಕ ಸಭೆ ನಡೆಯದೆ ಅಭಿವೃದ್ಧಿ ಕಾರ್ಯಗಳು ನಿಂತ ನೀರಾಗಿದೆ. ಜನಸಾಮಾನ್ಯರ ಕೆಲ ಕಾಂiÀರ್iಗಳಿಗೂ ಕಡಿವಾಣ ಬಿದ್ದಿದೆ.

ಪಂಚಾಯಿತಿಯ ಸುಂಟಿಕೊಪ್ಪ ಗ್ರಾಮ ಮಾಸಿಕ ಸಾಮಾನ್ಯ ಸಭೆಯು ನವೆಂಬರ್‍ನಲ್ಲಿ ನಡೆಯಿತು. ಆ ನಂತರ ಡಿಸೆಂಬರ್‍ನಲ್ಲಿ 1 ತುರ್ತುಸಭೆ ಜಮಾಬಂದಿ ಸಭೆ ನಡೆದಿದೆ. ಆ ಸಭೆಯಲ್ಲಿ ಸದಸ್ಯರುಗಳು ಗೈರಾಗಿದ್ದರು.

ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಹಾಗೂ ಗ್ರಾಮದ ಜನಸಾಮಾನ್ಯರ ತುರ್ತು ಅರ್ಜಿ ವಿಲೇವಾರಿ, ಗ್ರಾಮ ಪಂಚಾ ಯಿತಿಯ ವಾಣಿಜ್ಯ ಮಳಿಗೆಗಳ, ಕೋಳಿ, ಕುರಿ, ಸಂತೆ ಮಾರುಕಟ್ಟೆ ಹಾಗೂ ಅಂಗಡಿಗಳ ಹರಾಜು ಪ್ರಕ್ರಿಯೆಗೆ ಅನುಮೋದನೆ ನೀಡಲು ಜನವರಿ 11 ರಂದು ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯನ್ನು ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಕರೆದಿದ್ದರು. ಆದರೆ ಈ ಸಭೆಗೆ ಕೇವಲ ಅಧ್ಯಕ್ಷರೂ ಸೇರಿದಂತೆ 11 ಮಂದಿ ಮಾತ್ರ ಹಾಜರಾಗಿದ್ದರು. 20 ಮಂದಿ ಸಂಖ್ಯಾಬಲವಿರುವ ಈ ಪಂಚಾಯಿತಿಯಲ್ಲಿ ಕೋರಂ ಇಲ್ಲದೆ ಸಾಮಾನ್ಯ ಸಭೆಯನ್ನು ಮುಂದೂಡಲಾಗಿತ್ತು.

ಆ ನಂತರ ತಾ. 23 ರಂದು ಚುನಾವಣೆ ಬೇಗನೆ ಬರುವ ಸಾಧ್ಯತೆ ಇರುವದರಿಂದ ಪಂಚಾಯಿತಿಯ ಅಂಗಡಿ ಮಳಿಗೆಗಳ, ಕೋಳಿ, ಕುರಿ, ಹಸಿಮೀನು ಮಾರುಕಟ್ಟೆಯ ಹರಾಜು ನಡೆಸಿ ಪಂಚಾಯಿತಿಗೆ ಆದಾಯ ತಂದು ಕೊಡಲು ಅಧ್ಯಕ್ಷರು ಸಭೆ ಕರೆದರೂ ಕೇವಲ 9 ಮಂದಿ ಮಾತ್ರ ಭಾಗವಹಿಸಿದ್ದರು. ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್, ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಸದಸ್ಯರು ಗಳಾದ ಬಿ.ಎಂ. ಸುರೇಶ್, ಸಿ. ಚಂದ್ರ, ಈಶ್ವರ, ನಾಗರತ್ನ, ಜ್ಯೋತಿ ಭಾಸ್ಕರ್, ಗಂಗಮ್ಮ ಬೀಮಯ್ಯ, ಗಿರೀಜಾ ಉದಯ ಕುಮಾರ್ ಹಾಜರಿದ್ದರೆ, ಉಳಿದ ಸದಸ್ಯರುಗಳಾದ ಕೆ.ಎಸ್. ರತ್ನ, ಕೆ.ಇ. ಕರೀಂ, ಕೆ.ಎಂ. ರಜಾಕ್, ವಳ್ಳಿ, ಶಾಹೀದ್, ರಹೆನಾ ಸುಲ್ತಾನ್, ಶಿವಮ್ಮ, ಸೋಮಯ್ಯ, ಶೋಭಾ ರವಿ, ಜಿ.ಜಿ. ಹೇಮಂತ್ ಕುಮಾರ್ ಹಾಗೂ ಎ. ಶ್ರೀಧರ್ ಕುಮಾರ್ ಅವರುಗಳು ಗೈರಾಗಿದ್ದರು. ಇದರಿಂದ ಸದಸ್ಯರುಗಳ ಕೋರಂ ಇಲ್ಲದೆ ಗ್ರಾಮ ಪಂಚಾಯತ್ ರಾಜ್ ಕಾಯ್ದೆ ಅನ್ವಯ ಸಭೆ ನಡೆಸಲಾಗದೆ ಸಭೆಯನ್ನು ಮುಂದೂಡಲಾಯಿತು.

ಗ್ರಾ.ಪಂ. ಪ್ರತಿಯೊಬ್ಬ ಪ್ರಜೆಗಳ ಪ್ರಥಮ ಬೇಡಿಕೆಗಳ ಪ್ರಮುಖ ಕೇಂದ್ರವಾಗಿರುವ ಗ್ರಾ.ಪಂ.ಗೆ ಜನರ ಮತದಿಂದ ಗೆದ್ದು ಬಂದಿರುವ ಗ್ರಾ.ಪಂ. ಸದಸ್ಯರುಗಳು ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಬೇಕಾಬಿಟ್ಟಿ ನಡೆಯುತ್ತಿರುವದು ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ. ಈ ಗ್ರಾ.ಪಂ. ಯಲ್ಲಿ ಸಾರ್ವಜನಿಕರ ಬೇಕು ಬೇಡಿಕೆಗಳ 30 ಅರ್ಜಿಗಳು ಸಾಮಾನ್ಯ ಸಭೆಯಲ್ಲಿ ವಿಲೇವಾರಿ ಮಾಡ ಬೇಕಾಗಿತ್ತು. ಅಲ್ಲದೆ ಮಾರುಕಟ್ಟೆ ಅಂಗಡಿ ಮಳಿಗೆಗಳ ಹರಾಜಿಗೂ ಗ್ರಾ.ಪಂ. ಸದಸ್ಯರುಗಳ ಅಂಕಿತ ಬೇಕಾಗಿತ್ತು. ಅದಕ್ಕೆಲ್ಲಾ ಇದೀಗ ತಡೆಯಾಗಿದೆ.

-ರಾಜು ರೈ