ಮಡಿಕೇರಿ, ಜ. 24: ವಿಶೇಷವಾದ ರಥಸಪ್ತಮಿಯ ದಿನವಾದ ಇಂದು ಜಗತ್ತನ್ನು ಬೆಳಗೋ ಸೂರ್ಯದೇವನ ಜನುಮದಿನ ವಾಗಿದ್ದು, ಈ ಹಿನ್ನೆಲೆಯಲ್ಲಿ ಸೂರ್ಯದೇವನಿಗೆ 108 ಸೂರ್ಯ ನಮಸ್ಕಾರ ಸಮರ್ಪಿಸಲಾಯಿತು.

ಭಾರತೀಯ ವಿದ್ಯಾಭವನ ಯೋಗ ಕೇಂದ್ರ ಹಾಗೂ ಪಥಂಜಲಿ ಯೋಗ ಶಿಕ್ಷಣ ಸಮಿತಿ ಸಹಯೋಗದೊಂದಿಗೆ ಇಲ್ಲಿನ ಪ್ರವಾಸೀ ತಾಣ ರಾಜಾಸೀಟ್ ಉದ್ಯಾನವನದಲ್ಲಿ ಮುಂಜಾನೆ 5.30 ರಿಂದ 7.30ರವರೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಒಟ್ಟು 131 ಮಂದಿ ಪಾಲ್ಗೊಂಡು ಸೂರ್ಯನಿಗೆ ನಮಸ್ಕರಿಸಿದರು.

ಮೈಕೊರೆಯುವ ಚಳಿಯಲ್ಲೂ ಎರಡು ಯೋಗ ಕೇಂದ್ರಗಳ ಯೋಗ ಪಟುಗಳು, ಫೀ.ಮಾ. ಕಾರ್ಯಪ್ಪ ಕಾಲೇಜಿನ ಯೋಗಿಕ್ ಸೈನ್ಸ್‍ನ ಪದಾಧಿಕಾರಿಗಳು, ಜ. ತಿಮ್ಮಯ್ಯ ಹಾಗೂ ಕೊಡಗು ವಿದ್ಯಾಲಯದ ಪುಟಾಣಿ ಮಕ್ಕಳು, ವಯೋವೃದ್ಧರು ಸೇರಿದಂತೆ ಮಹಿಳೆಯರು ಪಾಲ್ಗೊಂಡಿದ್ದುದು ವಿಶೇಷವಾಗಿತ್ತು. ಯೋಗಗುರುಗಳಾದ ಕೆ.ಕೆ. ಮಹೇಶ್‍ಕುಮಾರ್ ಹಾಗೂ ಶ್ರೀಪತಿ ಅವರುಗಳ ಮಾರ್ಗದರ್ಶನದಲ್ಲಿ ಸೂರ್ಯನಿಗೆ ನಮಸ್ಕರಿಸಲಾಯಿತು. ಭಾಗವಹಿಸಿದ್ದವರಿಗೆ ಬಿಸಿ ಬಿಸಿ ಪಾನಕ ಹಾಗೂ ಪಥಂಜಲಿ ಬಿಸ್ಕತ್ತುಗಳನ್ನು ವಿತರಿಸಲಾಯಿತು.