ಗೋಣಿಕೊಪ್ಪ ವರದಿ, ಜ. 24: ಪಾಲಿಬೆಟ್ಟ ಸಮೀಪದ ಹೊಸಳ್ಳಿ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಮೂರು ಕಾಡಾನೆಗಳನ್ನು ತಿತಿಮತಿ ರ್ಯಾಪಿಡ್ ರೆಸ್ಪಾನ್ಸ್ ಟೀಂ ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದೆ.

ಕಾಫಿ ಕೊಯ್ಲು ಸಂದರ್ಭ ಅಲ್ಲಿನ ಟಾಟಾಕಾಫಿ ತೋಟದಲ್ಲಿ ಸೇರಿ ಕೊಂಡು ಕಾರ್ಮಿಕರಲ್ಲಿ ಆತಂಕ ಮೂಡಿಸಿತ್ತು. ಕಾರ್ಯಾಚರಣೆ ನಡೆಸಿದ ತಂಡವು ಆನೆಗಳನ್ನು ಅಬ್ಬೂರು ಅರಣ್ಯದ ಮೂಲಕ ಕಾಡಿಗೆ ಸೇರಿಸಿದೆ.

ಪತ್ತೆಯಾದ ಆನೆಗಳನ್ನು ಕಾಡಿಗೆ ಅಟ್ಟುವ ಮುನ್ನ ಕಾರ್ಮಿಕರತ್ತ ಆನೆಗಳು ನುಸುಳದಂತೆ ಯೋಜನೆ ರೂಪಿಸಿಕೊಳ್ಳಲಾಯಿತು. ಆನೆಗಳು ಅತ್ತ ಬಾರದಂತೆ ಆರ್‍ಆರ್‍ಟಿ ತಂಡದ ಸದಸ್ಯರುಗಳು ತಡೆ ಮಾಡಿ, ಕೊಯ್ಲುವಿಗೆ ಸಹಕರಿಸಿದರು. ನಂತರ ಆನೆಗಳನ್ನು ಕಾಡಿಗೆ ಸೇರಿಸಲಾಯಿತು.

ಆರ್‍ಆರ್‍ಟಿ ತಂಡದಲ್ಲಿ ಪೆಮ್ಮುಡಿಯಂಡ ಸಂಜು ಸಂತೋಶ್, ದಿನೇಶ, ಸುರೇಶ, ವಿನಯ್ ಮತ್ತು ಮುತ್ತುಮಣಿ ಪಾಲ್ಗೊಂಡಿದ್ದರು.