ಸೋಮವಾರಪೇಟೆ, ಜ. 25: ತಾಲೂಕಿನ ಅಂಗನವಾಡಿಗಳಿಗೆ ಸರಬರಾಜಾಗುತ್ತಿರುವ ಪಡಿತರಗಳ ಗುಣಮಟ್ಟ ಕಳಪೆಯಾಗಿದೆ. ನ್ಯೂಟ್ರಿಮಿಕ್ಸ್‍ನಲ್ಲಿ ಹುಳು ಇದ್ದು, ಇದನ್ನು ಬಳಸಲು ಯೋಗ್ಯವಾಗಿಲ್ಲ. ಸರಬರಾಜುದಾರರು ಸಮಯಕ್ಕೆ ಸರಿಯಾಗಿ ಸಾಮಗ್ರಿಗಳನ್ನು ತಲುಪಿಸುತ್ತಿಲ್ಲ. ಕೆಲವೊಮ್ಮೆ ತೂಕದಲ್ಲೂ ವ್ಯತ್ಯಾಸ ಬರುತ್ತಿದೆ ಎಂದು ವಿವಿಧ ಅಂಗನವಾಡಿ ಕಾರ್ಯಕರ್ತೆಯರು ಆರೋಪಿಸಿದರು.

ಇಲ್ಲಿನ ಸ್ತ್ರೀಶಕ್ತಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿಯ ಆಶ್ರಯದಲ್ಲಿ ಆಯೋಜಿಸ ಲಾಗಿದ್ದ ಆಹಾರ ಸರಬರಾಜುದಾರರು, ಸಾಗಾಣಿಕೆದಾರರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಮನ್ವಯ ಸಮಿತಿ ಸಭೆಯಲ್ಲಿ ಈ ಬಗ್ಗೆ ಆರೋಪ ಕೇಳಿಬಂತು.

ಅಂಗನವಾಡಿ ಕಾರ್ಯಕತೆಯರು ಆಹಾರ ಸಾಗಾಣಿಕೆದಾರರು ಮತ್ತು ಸರಬರಾಜುದಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷರು ಹಾಗೂ ಸದಸ್ಯರ ಸಮ್ಮುಖದಲ್ಲಿ ಚರ್ಚಿಸಲಾಯಿತು. ಅಂಗನವಾಡಿಗಳಿಗೆ ಸರಬರಾಜಾಗುವ ಪಡಿತರಗಳ ಗುಣಮಟ್ಟ ಕಾಯ್ದುಕೊಳ್ಳಲು ಸಂಬಂಧಿಸಿದವರು ಮುಂದಾಗಬೇಕು. ತಪ್ಪಿದಲ್ಲಿ ಕ್ರಮಕೈಗೊಳ್ಳಲಾಗುವದು ಎಂದು ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಹೇಳಿದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲೇಸ್ವಾಮಿ ಮಾತನಾಡಿ, ಕೂಡ್ಲೂರಿನಲ್ಲಿರುವ ಆಹಾರ ಘಟಕದಿಂದ ಸರಬರಾಜು ಮಾಡುವ ಆಹಾರ ಧಾನ್ಯಗಳನ್ನು ಕ್ರಮವಾಗಿ ಪರಿಶೀಲಿಸಿ, ವಸ್ತುವಿನ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಬೇಕು. ಆಹಾರ ಸರಬರಾಜಿನಲ್ಲಿ ವ್ಯತ್ಯಾಸಗಳು ಕಂಡುಬಂದಲ್ಲಿ ಸಾಗಾಣಿಕೆದಾರರು ಮತ್ತು ಸರಬರಾಜುದಾರರನ್ನೇ ಹೊಣೆಗಾರರನ್ನಾಗಿ ಮಾಡಲಾಗುವದು ಎಂದರು.

ಜಿಲ್ಲೆಯ 67 ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರ ಹುದ್ದೆ ಖಾಲಿ ಇದ್ದು, ಹಲವಾರು ಕಟ್ಟಡಗಳು ಬಾಡಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕಾರ್ಯಕರ್ತರನ್ನು ನೇಮಿಸಿಕೊಳ್ಳುವಾಗ ಆಯಾ ಅಂಗನವಾಡಿ ವ್ಯಾಪ್ತಿಯವರನ್ನು ನೇಮಿಸಿಕೊಳ್ಳಬೇಕು. ಮೂರು ಬಾರಿ ಅರ್ಜಿ ಕರೆದು, ಯಾರೂ ಬಾರದಿದ್ದಲ್ಲಿ ಪಕ್ಕದ ಗ್ರಾಮದವರನ್ನು ನೇಮಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಭಿಮನ್ಯುಕುಮಾರ್ ಮಾತನಾಡಿ, ಬಾಡಿಗೆ ಆಧಾರದಲ್ಲಿ ನಡೆಯುತ್ತಿರುವ ಅಂಗನವಾಡಿ ಕಟ್ಟಡಗಳ ಸಮೀಪ ಪೈಸಾರಿ ಜಾಗವಿದ್ದಲ್ಲಿ ಅಥವಾ ದಾನಿಗಳು ಉದಾರವಾಗಿ ಜಾಗವನ್ನು ನೀಡುವದಿದ್ದಲ್ಲಿ ಅದನ್ನು ಪರಿಶೀಲಿಸಬೇಕೆಂದು ಹೇಳಿದರು.

ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಧರ್ಮಪ್ಪ, ಸದಸ್ಯರಾದ ತಂಗಮ್ಮ, ಪುಷ್ಪ, ಸಬಿತಾ ಚೆನ್ನಕೇಶವ, ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಶಿಶು ಅಭಿವೃದ್ದಿ ಯೋಜನಾಧಿಕಾರಿ ಮಹೇಶ್ ಉಪಸ್ಥಿತರಿದ್ದರು.