ಒಡೆಯನಪುರ, ಜ. 24: ಜಾತ್ರೆ, ಉತ್ಸವ ಮುಂತಾದ ಗ್ರಾಮೀಣ ಜಾನಪದ ಸೊಗಡುಗಳು ನಮ್ಮ ದೇಶದ ಸಂಸ್ಕøತಿಯ ಪ್ರತೀಕಗಳು’ ಎಂದು ಕೊಡ್ಲಿಪೇಟೆ ಕಲ್ಲುಮಠದ ಮಹಾಂತಸ್ವಾಮೀಜಿ ಅಭಿಪ್ರಾಯ ಪಟ್ಟರು. ಅವರು ಹಂಡ್ಲಿ ಗ್ರಾ.ಪಂ. ವ್ಯಾಪ್ತಿಯ ಗುಡುಗಳಲೆ ಜಯದೇವ ಜಾತ್ರಾ ಮೈದಾನದ ಸಭಾಂಗಣದಲ್ಲಿ ಹಂಡ್ಲಿ, ಶನಿವಾರಸಂತೆ, ನಿಡ್ತ, ದುಂಡಳ್ಳಿ ಗ್ರಾ.ಪಂ.ಗಳ ಸಹಯೋಗದಲ್ಲಿ 73ನೇ ವರ್ಷದ ಗುಡುಗಳಲೆ ಶ್ರೀ ಜಯದೇವ ಜಾನುವಾರುಗಳ ಜಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮೀಣ ಭಾಗದ ರೈತಾಪಿ ಜನರ ಸಂತೋಷಕ್ಕಾಗಿ ಜಾನಪದ ಜಾತ್ರೆ, ಜಾನುವಾರುಗಳ ಜಾತ್ರೆ ಮುಂತಾದ ಗ್ರಾಮೀಣ ಉತ್ಸವಗಳನ್ನು ನಡೆಸಲಾಗುತ್ತದೆ, ಇದರಿಂದ ದೇಶದ ಸಂಸ್ಕøತಿಯೂ ಶ್ರೀಮಂತಗೊಳ್ಳುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ರೈತರು ಜಾನುವಾರುಗಳನ್ನು ಸಾಕುವದನ್ನು ಮತ್ತು ಅವುಗಳಿಂದ ವ್ಯವಸಾಯ ಮಾಡುವದನ್ನು ಕಡಿಮೆ ಮಾಡಿದ್ದಾರೆ. ಇದರಿಂದ ಜಾನುವಾರುಗಳ ಜಾತ್ರೆ ಹಿಂದಿನ ವೈಭವವನ್ನು ಕಳೆದು ಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆಗೆ ಪೋಷಕರು ಹಾಗೂ ಹಿರಿಯರು ಜಾತ್ರೆ, ಉತ್ಸವ ಗ್ರಾಮೀಣ ಸೊಗಡುಗಳ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಕಿರಿಕೊಡ್ಲಿ ಮಠದ ಸದಾಶಿವಸ್ವಾಮೀಜಿ ಮಾತನಾಡಿ, ಸಂಸ್ಕøತಿ ಸಂಸ್ಕಾರಗಳು ಬೆಳೆಯಲು ಜಾತ್ರೆ ಮತ್ತು ಗ್ರಾಮೀಣ ಉತ್ಸವಗಳು ಸಹಕಾರಿಯಾಗುತ್ತವೆ. ಸಮಾಜ ಬದಲಾಗುತ್ತಿರುವ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆಗೆ ಜಾತ್ರೆಯ ಬಗ್ಗೆ ಅಭಿಮಾನ ಬೆಳೆಯುವಂತೆ ಮಾಡಿದರೆ ಮುಂದಿನ ಪೀಳಿಗೆ ಇದನ್ನು ಅನುಸರಿಸಿಕೊಂಡು ಹೋಗಲು ಸಾಧ್ಯವಾಗುತ್ತಿದೆ ಎಂದರು.

ಜಿ.ಪಂ. ಸದಸ್ಯ ಸಿ.ಪಿ. ಪುಟ್ಟರಾಜು ಮಾತನಾಡಿ, ಪ್ರಸ್ತುತ ಗುಡುಗಳಲೆ ಜಾತ್ರಾ ಮೈದಾನದ ಅಭಿವೃದ್ಧಿಗಾಗಿ ಈಗಾಗಲೆ ಸರಕಾರ ದಿಂದ 4 ಲಕ್ಷ ರೂ. ಮಂಜೂರು ಮಾಡಲಾಗಿದೆ. ಮುಂದಿನ ದಿನದಲ್ಲಿ ಜಾತ್ರಾ ಮೈದಾನದ ಅಭಿವೃದ್ದಿಗಾಗಿ ಹೆಚ್ಚಿನ ಅನುದಾನ ನೀಡಲು ಪ್ರಯತ್ನಿಸಲಾಗುವದೆಂದರು. ಕೊಡಗು ಜಿಲ್ಲೆಯಲ್ಲಿ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ಯಾವದರಲ್ಲೂ ಅಭಿವೃದ್ದಿ ಕಾಣುತ್ತಿಲ್ಲ ಇದಕ್ಕೆ ಜನಪ್ರತಿನಿಧಿಗಳು, ಸರಕಾರ ಮತ್ತು ಅಧಿಕಾರಿಗಳು ಕಾರಣ. ಈ ಹೋಬಳಿಯ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡಿದರೆ ಮಾತ್ರ ಗ್ರಾಮೀಣ ಭಾಗವೂ ಕೂಡ ಅಭಿವೃದ್ಧಿ ಹೊಂದುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಜಾತ್ರಾ ಸಮಿತಿ ಅಧ್ಯಕ್ಷ ಎಂ.ಪಿ. ಬಸವರಾಜು, ಜಾತ್ರೆಯಲ್ಲಿ ಜಾನುವಾರುಗಳು ಹಿಂದಿನಂತೆ ಸೇರದಿದ್ದರೂ ಸಹ ಜಾತ್ರಾ ವೈಭವ ಕಳೆಗುಂದಬಾರದೆಂಬ ಉದ್ದೇಶದಿಂದ ಜಾತ್ರೆಯನ್ನು ಮುನ್ನಡೆಸಿಕೊಂಡು ಬರುತ್ತಿದ್ದೇವೆ. ಫೆ.1 ರಿಂದ ಪ್ರತಿದಿನ ರಾತ್ರಿ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಹಗಲು ಕ್ರೀಡಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಿಡುಗಳಲೆ ಮಠದ ಇಮ್ಮಡಿ ಶಿವಲಿಂಗಸ್ವಾಮೀಜಿ, ತಾ.ಪಂ. ಸದಸ್ಯ ಬಿ.ಎಸ್. ಅನಂತ್‍ಕುಮಾರ್ ಮಾತನಾಡಿದರು. ಜಾತ್ರಾ ಉದ್ಘಾಟನೆಯನ್ನು ಶನಿವಾರಸಂತೆ ಎಸ್‍ಐ ಮರಿಸ್ವಾಮಿ ನೆರವೇರಿಸಿದರು. ಸಮಾರಂಭದಲ್ಲಿ ಹಂಡ್ಲಿ ಗ್ರಾ.ಪಂ. ಅಧ್ಯಕ್ಷ ಸಂದೀಪ್, ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷ ಸಿ.ಜೆ. ಗಿರೀಶ್, ಹಿರಿಯರಾದ ಡಿ.ಬಿ. ಸೋಮಪ್ಪ, ಸಂಗಯ್ಯ, ಹಂಡ್ಲಿ ಗ್ರಾ.ಪಂ. ಸದಸ್ಯರುಗಳು ಹಾಗೂ ಜಾತ್ರಾ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.

ಜಾತ್ರಾ ಉದ್ಘಾಟನೆಯ ಅಂಗವಾಗಿ ಬೆಳಗ್ಗೆ ಜಾತ್ರಾ ಮೈದಾನದಲ್ಲಿರುವ ಬಸವೇಶ್ವರ ದೇವಾಲಯದಿಂದ ದೇವರ ಅಡ್ಡಪಲ್ಲಕ್ಕಿಯನ್ನು ಗುಡುಗಳಲೆ ಜಂಕ್ಸನ್‍ನಲ್ಲಿರುವ ಶ್ರೀ ಬಸವೇಶ್ವರ ದೇವಾಲಯದವರೆಗೆ ಮೆರವಣಿಗೆಯಲ್ಲಿ ಕೊಂಡೊಯ್ದು ಪೂಜೆ ಸಲ್ಲಿಸಲಾಯಿತು. ವೀರಗಾಸೆ ಕುಣಿತ, ರೈತರ ಜಾನುವಾರುಗಳು ಮತ್ತು ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ನಡೆಸಲಾಯಿತು.