ಮಡಿಕೇರಿ, ಜ. 24: ಕರ್ನಾಟಕದ ಎಲ್ಲಾ 29 ಜಿಲ್ಲೆಗಳಿಗೆ ರೈಲ್ವೇ ಸಂಪರ್ಕವಿದ್ದು, ಈ ಸೌಲಭ್ಯ ವಂಚಿತ ಕೊಡಗು ಜಿಲ್ಲೆಯ ಕುಶಾಲನಗರದ ತನಕ ಯೋಜನೆ ಜಾರಿಗೊಳಿಸಲಾಗುವದು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಪುನರುಚ್ಚರಿಸಿದ್ದಾರೆ. ಇಲ್ಲಿನ ಸುದರ್ಶನ ಅತಿಥಿ ಗೃಹದಲ್ಲಿಂದು ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಮೈಸೂರು, ಕೆ.ಆರ್. ನಗರ, ಹುಣಸೂರು, ಪಿರಿಯಾಪಟ್ಟಣ ಮೂಲಕ ಕೊಡಗಿನ ಕುಶಾಲನಗರಕ್ಕೆ ರೈಲು ಯೋಜನೆ ಯಿಂದ ಯಾವ ಹಾನಿ ಆಗೊಲ್ಲ ವೆಂದು ಸಮರ್ಥನೆ ನೀಡಿದರು.

ದೇಶದ ಸೇನೆಯಲ್ಲಿ ಸೇವೆ ಸಲ್ಲಿಸುವ ಕೊಡಗಿನ ಯೋಧರ ಕುಟುಂಬಗಳ ಸಹಿತ ಜನತೆಯ ಬೇಡಿಕೆಯಂತೆ ಈ ಯೋಜನೆಗೆ ತಾವು ರೈಲ್ವೇ ಸಚಿವರಾಗಿದ್ದಾಗ ಕೇಂದ್ರದ ಮೇಲೆ ಒತ್ತಡ ಹೇರಿದ್ದು, ಈ ಯೋಜನೆಗೆ ಹೆಚ್ಚಿನ ಅನುದಾನ ಕೂಡ ಬೇಕಿಲ್ಲವೆಂದು ನೆನಪಿಸಿದರು. ಈಗಾಗಲೇ ಮಾರ್ಗ ಸಮೀಕ್ಷೆ ನಡೆಸಲಾಗಿದೆ ಎಂಬದಾಗಿಯೂ ಕೇಂದ್ರ ಸಚಿವರು ಮಾರ್ನುಡಿದರು.

ತಾವು ಹೊಂದಿದ್ದ ರೈಲ್ವೇ ಖಾತೆ ಬದಲಾವಣೆಗೊಳ್ಳದಿದ್ದರೆ ಈ ವೇಳೆಗೆ ಕುಶಾಲನಗರ ತನಕ ರೈಲು ಸಂಪರ್ಕ ಯೋಜನೆ ಇನ್ನಷ್ಟು ಪ್ರಗತಿ ಸಾಧಿಸುತ್ತಿದ್ದುದಾಗಿಯೂ ಸದಾನಂದಗೌಡ ಸುಳಿವು ನೀಡಿದರು.

ಬದಲಾಗಿ ಕೇರಳದ ತಲಚೇರಿಯಿಂದ ವೀರಾಜಪೇಟೆ ಮಾರ್ಗವಾಗಿ ಪಿರಿಯಾಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಯೋಜನೆಗೆ, ಕರ್ನಾಟಕ ಹಾಗೂ ಕೇರಳ ರಾಜ್ಯ ಸರಕಾರಗಳು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಬಗ್ಗೆ ಪರಿಶೀಲಿಸಿ ಜನತೆಯ ಅಭಿಪ್ರಾಯದಂತೆ ನಿರ್ಧಾರ ಕೈಗೊಳ್ಳಲಾಗುವದು ಎಂದು ಅವರು ಸ್ಪಷ್ಟಪಡಿಸಿದರು.