ಕರಿಕೆ, ಜ. 24: ಕಳೆದ ಒಂದು ವರ್ಷದಿಂದ ಜನರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಸರಕಾರ ಆಯಾ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಪಹಣಿಪತ್ರ (ಆರ್‍ಟಿಸಿ) ವಿತರಿಸಲು ಪ್ರಾರಂಭಿಸಿತು. ಇದೀಗ ಮೂರು ತಿಂಗಳಿನಿಂದ ತಂತ್ರಾಂಶ ಬದಲಾವಣೆಯ ಕಾರಣದಿಂದ ಆರ್‍ಟಿಸಿ ದೊರೆಯುತ್ತಿಲ್ಲ. ಈ ಬಗ್ಗೆ ಗಮನಹರಿಸಬೇಕಾದ ಜಿಲ್ಲಾಡಳಿತ ಜನರ ಸಮಸ್ಯೆಗೆ ಸ್ಪಂದಿಸದೆ ಕಣ್ಮುಚ್ಚಿ ಕುಳಿತಿದ್ದು ಜನರು ಪರದಾಡುವಂತಾಗಿದೆ.

ಕರಿಕೆಯಂತಹ ಗ್ರಾಮೀಣ ಪ್ರದೇಶಗಳಲ್ಲಿ ರೈತರು ಆರ್‍ಟಿಸಿ ಪಡೆಯುವ ಸಲುವಾಗಿ ಸುಮಾರು 70 ಕಿ.ಮೀ. ದೂರ ಪ್ರಯಾಣ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದ್ದು, ಈ ಬಗ್ಗೆ ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ವಿಚಾರಿಸಿದರೆ ಕಳೆದ ನವೆಂಬರ್‍ವರೆಗೆ ಆರ್‍ಟಿಸಿ ವಿತರಿಸಿದ್ದು ನಂತರ ಜಿಲ್ಲಾಡಳಿತ ತಂತ್ರಾಂಶ ಬದಲಾವಣೆ ಮಾಡಿದ್ದು ಮುದ್ರಣ ಪೇಪರ್ ಸರಬರಾಜು ಮಾಡದ ಕಾರಣ ಪಹಣಿ ಪತ್ರ ವಿತರಿಸಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಅಸಾಯಕತೆಯನ್ನು ‘ಶಕ್ತಿ’ಯೊಂದಿಗೆ ತೋಡಿಕೊಳ್ಳುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಗ್ರಾಮಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರ್‍ಟಿಸಿ ಒದಗಿಸಲು ಕ್ರಮಕೈಗೊಳ್ಳಬೇಕೆಂದು ಜನರ ಆಗ್ರಹವಾಗಿದೆ.

ಸಮಸ್ಯೆ ಬಗೆಹರಿದಿದೆ: ಡಿಸಿ

ಗ್ರಾಮ ಪಂಚಾಯಿತಿಗಳಲ್ಲಿ ಆರ್‍ಟಿಸಿ ವಿತರಣೆ ಸ್ಥಗಿತಗೊಂಡ ವಿಷಯ ತನ್ನ ಗಮನಕ್ಕೆ ಬಂದಿದ್ದು, ಡಿಸೆಂಬರ್ 26ಕ್ಕೆ ತಂತ್ರಾಂಶ ಬದಲಾವಣೆ ಮಾಡಿ ತಾಂತ್ರಿಕ ಸಮಸ್ಯೆ ಬಗೆ ಹರಿದಿದ್ದು ಕೂಡಲೇ ಪಂಚಾಯಿತಿಗಳಿಗೆ ಮುದ್ರಣ ಕಾಗದ ವಿತರಿಸಲು ಸಂಬಂಧಿಸಿದ ತಹಶೀಲ್ದಾರರಿಗೆ ಸೂಚಿಸುತ್ತೇನೆ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ‘ಶಕ್ತಿ’ಗೆ ತಿಳಿಸಿದ್ದಾರೆ.