ಬೆಂಗಳೂರು, ಜ. 24: ಒಕ್ಕಲಿಗ ಸಮುದಾಯದ ಎಲ್ಲಾ ಉಪ ಪಂಗಡದವರು ಇನ್ನು ಮುಂದೆ ‘ಒಕ್ಕಲಿಗ ಅಥವಾ ಗೌಡ’ ಎಂದು ಗುರುತಿಸಿಕೊಳ್ಳುವ ಮೂಲಕ ಏಕತೆ ಮತ್ತು ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾ ನಂದನಾಥ ಮಹಾಸ್ವಾಮೀಜಿ ಸಲಹೆ ನೀಡಿದರು.

ವಿಶ್ವ ಒಕ್ಕಲಿಗರ ಮಹಾ ವೇದಿಕೆ ಹಾಗೂ ಕೊಡಗು ಮತ್ತು ದ.ಕ. ಗೌಡ ಸಮಾಜದ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪುತ್ತೂರು ಅನಂತರಾಜ ಗೌಡ ಅವರು ಬರೆದಿರುವ ‘ರಾಜ ಪರಂಪರೆಯ ಕೊಡಗು ಮತ್ತು ದ.ಕ. ಗೌಡರು’ ಕೃತಿ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವಿವಿಧ ಕಾರಣಗಳಿಂದಾಗಿ ಗಂಗಟ ಕಾರ್, ಮರಸು, ಹೊಸ ದೇವರು, ಕುಂಚಿಟಿಗ ಹೀಗೆ ಬೇರೆ ಬೇರೆ ನಾಮಾಂಕಿತದಡಿ ಕರೆಯಲಾಗುತ್ತಿದೆ. ಇನ್ನು ಮುಂದೆ ಈ ಉಪ ಪಂಗಡಗಳ ಹೆಸರು ಬಿಟ್ಟು ಒಂದೇ ನಾಮದಡಿ ‘ಒಕ್ಕಲಿಗ - ಗೌಡ’ ಎಂದು ಗುರುತಿಸಿಕೊಳ್ಳಿ. ಈ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ನಾವೆಲ್ಲರೂ ಒಂದಾಗಬೇಕು. ಈ ಕಾರ್ಯವನ್ನು ಶ್ರೀಮಠ ಈಗಾಗಲೇ ಕೈಗೊಂಡಿದೆ ಎಂದು ಶ್ರೀಗಳು ನುಡಿದರು.

ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ಕೊಡಗನ್ನು ಆಳಿದವರು ತಲಕಾಡಿನ ಗಂಗರು. ಇವರು ಮೂಲತಃ ಒಕ್ಕಲಿ ಗರು. ಕೊಡಗಿನ ಮಾಲೀಕರು ಒಕ್ಕಲಿಗರಾದರು ಇಂದು ಅದನ್ನು ಮರೆಮಾಚಲಾಗುತ್ತಿದೆ. ಈ ಇತಿಹಾಸದ ಪ್ರಜ್ಞೆ ಸಮುದಾಯದಲ್ಲಿ ಮೂಡಬೇಕು ಎಂದು ಕೃತಿಯ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಪಟ್ಟಡ ಶಿವಕುಮಾರ ಪುಸ್ತಕ ಪರಿಚಯಿಸಿದರು. ವಿಶ್ವ ಒಕ್ಕಲಿಗರ ಮಹಾ ವೇದಿಕೆ ಮಹಿಳಾ ವಿಭಾಗದ ಅಧ್ಯಕ್ಷೆ ಭಾರತಿ ಶಂಕರ್, ಹಾಸನ ಮತ್ತು ಕೊಡಗು ಜಿಲ್ಲೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಮಹಾಸ್ವಾಮೀಜಿ ಇದ್ದರು.