ಸೋಮವಾರಪೇಟೆ, ಜ.24: ಸಮೀಪದ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಹಾಗೂ 14ನೇ ಹಣಕಾಸು ಯೋಜನೆಯಡಿ ಭಾರೀ ಅವ್ಯವಹಾರ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಆಯಾ ವಾರ್ಡ್‍ಗಳ ಸದಸ್ಯರ ವಿರುದ್ಧವೂ ಕ್ರಮ ಜರುಗಿಸಬೇಕೆಂದು ಗ್ರಾ.ಪಂ. ಮಾಜಿ ಅಧ್ಯಕ್ಷರುಗಳು ಒತ್ತಾಯಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುವದಾಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ಭಾಸ್ಕರ ಸಾಯಿ, ಎಂ.ಕೆ.ತಿಮ್ಮಯ್ಯ (ತುಮ್ಮಣ್ಣ) ಅವರುಗಳು, ಗ್ರಾ.ಪಂ. ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಗ್ರಾ.ಪಂ.ನಲ್ಲಿ ಲಕ್ಷಾಂತರ ರೂ. ಅವ್ಯವಹಾರವಾಗಿರುವ ಬಗ್ಗೆ ಲೆಕ್ಕಪರಿಶೋಧನಾ ವರದಿಯಲ್ಲಿ ಬೆಳಕಿಗೆ ಬಂದಿದ್ದು, ಅವ್ಯವಹಾರಕ್ಕೆ ಕಾರಣರಾದ ಅಧಿಕಾರಿಗಳಿಂದ ಹಣ ವಸೂಲಾತಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳಿಗೆ ಶಿಫಾರಸ್ಸು ಮಾಡಿದ್ದಾರೆ. ಮಾದಾಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿಗಳು ನರೇಗಾದ ಸಿಬ್ಬಂದಿಗಳನ್ನು ಮಾತ್ರ ಇದರಲ್ಲಿ ಹೊಣೆಗಾರಿಕೆಯ ವ್ಯಕ್ತಿಗಳನ್ನಾಗಿ ಮಾಡಿದ್ದು, ಯಾವ ವಾರ್ಡ್‍ನಲ್ಲಿ ಅವ್ಯವಹಾರ ವಾಗಿದೆಯೋ ಆ ವಾರ್ಡ್‍ನ ಸದಸ್ಯರನ್ನೂ ಈ ಭ್ರಷ್ಟಾಚಾರದಲ್ಲಿ ಹೊಣೆಗಾರ ರನ್ನಾಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಾದಾಪುರ ಗ್ರಾ.ಪಂ.ನ ಕುಂಬೂರು ವಾರ್ಡ್ ಒಂದರಲ್ಲೇ ಸುಮಾರು 13ಲಕ್ಷಕ್ಕೂ ಅಧಿಕ ಹಣ ಅವ್ಯವಹಾರವಾಗಿದೆ. ಇದರಲ್ಲಿ ವಾರ್ಡ್‍ನ ಈರ್ವರು ಸದಸ್ಯರ ಕೈವಾಡವೂ ಇದ್ದು, ಇವರುಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಈ ಭಾಗದ ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ಗ್ರಾ.ಪಂ. ಎದುರು ಪ್ರತಿಭಟನೆ ನಡೆಸಲಾಗುವದು ಎಂದು ಭಾಸ್ಕರ್ ಸಾಯಿ ಎಚ್ಚರಿಸಿದ್ದಾರೆ.