ಸಿದ್ದಾಪುರ, ಜ. 25: ಕರಡಿಗೋಡುವಿನಲ್ಲಿ ಕಾಡಾನೆ ಧಾಳಿಗೆ ಬೆಳೆಗಾರರೊಬ್ಬರು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖಾಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಾಗಿರುವ ಹಿನ್ನೆಲೆ ಅರಣ್ಯ ಸಚಿವರು ನೈತಿಕ ಹೊಣೆಹೊತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಒತ್ತಾಯಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ನಾಲ್ಕೂವರೆ ವರ್ಷಗಳಿಂದ ರಾಜ್ಯದಲ್ಲಿ ಆಡಳಿತವನ್ನು ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಕೊಡಗು ಜಿಲ್ಲೆಯಲ್ಲಿ 38 ಮಂದಿ ಕಾಡಾನೆಗೆ ಸಿಲುಕಿ ಸಾವನ್ನಪ್ಪಿದ್ದರೂ ಯಾವದೇ ರೀತಿಯ ಶಾಶ್ವತ ಯೋಜನೆಯನ್ನು ಜಾರಿಗೆ ತರದೆ ನಿರ್ಲಕ್ಷ್ಯ ವಹಿಸಿರುವದು ಖಂಡನೀಯ. ವನ್ಯ ಪ್ರಾಣಿಗಳ ಹಾವಳಿಯಿಂದಾಗಿ ಬೆಳೆಗಾರರ ಹಾಗೂ ರೈತರ, ಕಾರ್ಮಿಕರ, ಜೀವನ ದುಸ್ತರವಾಗಿದೆ. ಕಾಡು ಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲಗೊಂಡಿದೆ ಎಂದು ಆರೋಪಿಸಿದ್ದಾರೆ.
ಅರಣ್ಯ ಅಧಿಕಾರಿಗಳ ವಿರುದ್ಧ ಹೋರಾಟಗಾರರು, ಸಂಬಂಧಿಕರು, ಸಿದ್ದಾಪುರ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಿರುವ ವಿಚಾರ ಸ್ವಾಗತಾರ್ಹವಾಗಿದೆ. ಜಿಲ್ಲೆಯ ಅರಣ್ಯ ಇಲಾಖಾಧಿಕಾರಿಗಳು ಅಲ್ಲದೇ, ರಾಜ್ಯ ಸಚಿವರ ವಿರುದ್ಧ ಹಾಗೂ ರಾಜ್ಯದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಯವರ ವಿರುದ್ಧ ಮೊಕದ್ದಮೆ ದಾಖಲಿಸಬೇಕು. ಇಂಥಹ ಕಾನೂನಿನ ಹೋರಾಟಕ್ಕೆ ಜೆ.ಡಿ.ಎಸ್. ಪಕ್ಷವು ತನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ಸಂಕೇತ್ ಪೂವಯ್ಯ ತಿಳಿಸಿದ್ದಾರೆ.