ಕುಶಾಲನಗರ, ಜ. 25: ಕುಶಾಲನಗರದ ಪಟ್ಟಣದ ಅಭಿವೃದ್ಧಿ ಪಥದತ್ತ ಸಾಗುವಲ್ಲಿ ತಮಿಳಿಗರು ಪ್ರಮುಖ ಪಾತ್ರ ವಹಿಸಿರುವದಾಗಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಟಿ.ಆರ್. ಶರವಣ ಕುಮಾರ್ ಹೇಳಿದರು.
ಕುಶಾಲನಗರದ ತಮಿಳ್ ಸಂಘಂ ವತಿಯಿಂದ ಸ್ಥಳೀಯ ಎಪಿಸಿಎಂಎಸ್ ಸಭಾಂಗಣದಲ್ಲಿ ಆಯೋಜಿಸಲಾದ 2ನೇ ವರ್ಷದ ಪೊಂಗಲ್ ಸಂಕ್ರಾಂತಿ ಹಬ್ಬದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಳೆದ 5 ದಶಕಗಳ ಹಿಂದೆ ಕೇವಲ ಬೆರಳೆಣಿಕೆಯ ಜನಸಂಖ್ಯೆ ಯಿಂದ ಕೂಡಿದ್ದ ಕುಶಾಲನಗರ ಪ್ರಸಕ್ತ ಬೆಳವಣಿಗೆ ಕಂಡಿದ್ದು, ಸಮುದಾಯ ಬಾಂಧವರು ತಮ್ಮ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ನೀಡುವತ್ತ ಗಮನಹರಿಸ ಬೇಕೆಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡು ತಮ್ಮದೇ ಆದ ಛಾಪನ್ನು ಮೂಡಿಸಿರುವ ತಮಿಳರು ಒಗ್ಗಟ್ಟಿನಿಂದ ತಮ್ಮ ಸಮಸ್ಯೆಗಳ ಪರಿಹಾರ ಕಂಡುಹಿಡಿಯಲು ಯತ್ನಿಸಬೇಕೆಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ, ಕುಶಾಲನಗರ ತಮಿಳ್ ಸಂಘದ ಅಧ್ಯಕ್ಷರಾದ ಕಾರ್ತೀಶನ್, ಉಪಾಧ್ಯಕ್ಷ ಪಳನಿಸ್ವಾಮಿ, ಮೈಸೂರು ತಮಿಳ್ ಸಂಘದ ಕಾರ್ಯದರ್ಶಿ ಶಾಂತಮೂರ್ತಿ, ಪ್ರಮುಖರಾದ ಗುಜೇಂದ್ರ, ಶಿವಕುಮಾರ್ ಮತ್ತಿತರರು ಇದ್ದರು.
ಇದೇ ಸಂದರ್ಭ ಸಂಘದ ಆಶ್ರಯದಲ್ಲಿ ಮಹಿಳೆಯರಿಂದ ಪೊಂಗಲ್ ಕಾರ್ಯಕ್ರಮ ನಡೆಯಿತು. ಸ್ಥಳೀಯ ಕೋಣಮಾರಿಯಮ್ಮ ದೇವಾಲಯದ ಆವರಣದಲ್ಲಿ ಪೂಜೆ ಸಲ್ಲಿಸುವ ಮೂಲಕ ಮಹಿಳೆಯರು ಪೊಂಗಲ್ ತಯಾರಿಕೆಗೆ ಚಾಲನೆ ನೀಡಿದರು.