ಶನಿವಾರಸಂತೆ, ಜ. 25: ಸರಕಾರ ಸಮುದಾಯಗಳನ್ನು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಕಾರ್ಯದರ್ಶಿ ವಾಗೀಶ್ ಪ್ರಸಾದ್ ಅಭಿಪ್ರಾಯಪಟ್ಟರು.

ಪಟ್ಟಣದ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ವೀರಶೈವ-ಲಿಂಗಾಯಿತ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹಾನಗಲ್ ಕುಮಾರಸ್ವಾಮೀಜಿ ಅವರ ಜಯಂತ್ಯುತ್ಸವ ಹಾಗೂ ಧಾರ್ಮಿಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೀರಶೈವ ಮತ್ತು ಲಿಂಗಾಯಿತ ಧರ್ಮದ ಎರಡು ಕಣ್ಣುಗಳಿದ್ದಂತೆ. ಸಮಾಜಕ್ಕೆ ವೀರಶೈವ ಸಮುದಾಯ ಶಾಲೆ, ಶಿಕ್ಷಣ, ದಾಸೋಹ ಇತ್ಯಾದಿ ಕೊಡುಗೆ ನೀಡುತ್ತಿವೆ. ಸಮುದಾಯದ ವರು ರಾಜಕೀಯ ಬಿಟ್ಟು ಸಂಘಟಿತರಾಗಬೇಕು. ಹೋರಾಟಕ್ಕೂ ಸಿದ್ಧರಿರಬೇಕು ಎಂದು ವಾಗೀಶ್ ಪ್ರಸಾದ್ ಕರೆ ನೀಡಿದರು.

ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಸಂಘಟನೆಯ ಕೊರತೆಯಿಂದ ವೀರಶೈವ ಲಿಂಗಾಯಿತ ಸಮುದಾಯ ಅಭಿವೃದ್ಧಿ ಕುಂಠಿತವಾಗಿದೆ. ಸರಕಾರವೂ ಕಡೆಗಣಿ ಸುತ್ತಿದೆ. ಒಗ್ಗಟ್ಟಿನಿಂದ ಸಮುದಾಯ ವನ್ನು ಬಲಪಡಿಸಬೇಕು ಎಂದರು.

ವೀರಾಜಪೇಟೆ ಕನ್ನಡ ಮಠದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ನಿವೃತ್ತ ಸರಕಾರಿ ಅಭಿಯೋಜಕ ಎಚ್.ಎಸ್. ಚಂದ್ರಮೌಳಿ, ಮುದ್ದಿನಕಟ್ಟೆ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಗೀತಾ ಜಯಂತ್, ನಿವೃತ್ತ ಆಯುಕ್ತ ಜಿ.ಎಸ್. ವಿರೂಪಾಕ್ಷಯ್ಯ ಹಾಗೂ ಕಲ್ಲುಮಠದ ಮಹಾಂತಸ್ವಾಮೀಜಿ ಮಾತನಾಡಿದರು.

ಈ ಸಂದರ್ಭ ವೀರಶೈವ ಸಮಾಜದ ಶಾಲಾ-ಕಾಲೇಜುಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಿರಿಯರು, ಸಾಧಕರನ್ನು ಸನ್ಮಾನಿಸಲಾಯಿತು.

ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ, ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ಕ್ರೀಡಾ ಸಮಿತಿ ಅಧ್ಯಕ್ಷ ಎಸ್. ಮಹೇಶ್, ಪ್ರಮುಖರಾದ ಸಂದೀಪ್, ಕೆ.ವಿ. ಮಂಜುನಾಥ್, ಹಾಲಪ್ಪ, ಕಾಂತರಾಜ್, ಸೋಮಪ್ಪ, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.