ಸೋಮವಾರಪೇಟೆ, ಜ. 24: ತಾಲೂಕಿನ ಸುಪ್ರಸಿದ್ಧ ಪ್ರವಾಸಿ ತಾಣ, ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುವ ಪ್ರಕೃತಿ ರಮಣೀಯ ಸೌಂದರ್ಯದ ಖನಿಯಾಗಿರುವ ಮಲ್ಲಳ್ಳಿ ಜಲಪಾತ ರಸ್ತೆಯಲ್ಲಿ ಸಂಚರಿಸಬೇಕಾದರೆ ಮೈಯೆಲ್ಲಾ ಕಣ್ಣಾಗಿರಬೇಕು. ಕೊಂಚ ಎಡವಟ್ಟಾದರೂ ಪ್ರಪಾತದೊಳಗೆ ನೆಗೆದು ಬೀಳೋದು ಖಚಿತ. ಈಗಾಗಲೇ ಹಲವಷ್ಟು ಇಂತಹ ಘಟನೆಗಳು ನಡೆದಿದ್ದರೂ ಸಂಬಂಧಿಸಿದ ಇಲಾಖೆ ಮಾತ್ರ ಕಿಂಚಿತ್ತೂ ಗಮನ ಹರಿಸಿಲ್ಲ.
ಸೋಮವಾರಪೇಟೆಯಿಂದ ಶಾಂತಳ್ಳಿ ಮಾರ್ಗವಾಗಿ ಹಂಚಿನಳ್ಳಿ ತಲುಪಿದರೆ ಅಲ್ಲಿಂದ ಕೇವಲ ಮೂರು ಕಿ.ಮೀ. ದೂರದಲ್ಲಿ ಪ್ರಕೃತಿ ನಿರ್ಮಿತ ಜಲಧಾರೆಯಂತಿರುವ ಮಲ್ಲಳ್ಳಿ ಜಲಪಾತ ಇದೆ. ಹಂಚಿನಳ್ಳಿಯಿಂದ ಮಲ್ಲಳ್ಳಿ ಜಲಪಾತಕ್ಕೆ ಕಳೆದ ವರ್ಷ ನೂತನವಾಗಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ.
ನಬಾರ್ಡ್ ನೆರವಿನೊಂದಿಗೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಮುಖಾಂತರ ಲೋಕೋಪಯೋಗಿ ಇಲಾಖೆ ರೂ. 3.19 ಕೋಟಿ ವೆಚ್ಚದಲ್ಲಿ ಮಲ್ಲಳ್ಳಿ ಜಲಪಾತದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ಮಣ್ಣು ಹಾಕಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಇದರೊಂದಿಗೆ ಮಲ್ಲಳ್ಳಿ ಜಲಪಾತದ ತಳಭಾಗಕ್ಕೆ ಇಳಿಯುವವರೆಗೂ ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು, ಜಲಪಾತದ ಸೌಂದರ್ಯವನ್ನು ಹತ್ತಿರದಿಂದ ಸವಿಯಲು ಅನುಕೂಲ ಕಲ್ಪಿಸಲಾಗಿದೆ. ಕೆಆರ್‍ಐಡಿಎಲ್ ಮೂಲಕ ರೂ. 1.92 ಕೋಟಿ ವೆಚ್ಚದಲ್ಲಿ ಹೆಚ್ಚುವರಿ ಮೆಟ್ಟಿಲು, ವಾಚಿಂಗ್ ಟವರ್, ಚೈನ್, ರೈಲಿಂಗ್ಸ್, ರೆಸ್ಟೋರೆಂಟ್ ಬ್ಲಾಕ್‍ಗಳ ಕಾಮಗಾರಿ ಪ್ರಗತಿಯಲ್ಲಿದೆ.
ಕಳೆದ ಅನೇಕ ದಶಕಗಳಿಂದ ಹೊರ ಜಗತ್ತಿಗೆ ಕಾಣದೇ ಅಜ್ಞಾತವಾಗಿಯೇ ಉಳಿದಿದ್ದ ಜಲಪಾತ ಇತ್ತೀಚೆಗೆ ಹೊರ ಪ್ರಪಂಚಕ್ಕೆ ಕಂಡುಬಂದು ಪ್ರವಾಸಿಗರ ನೆಚ್ಚಿನ ತಾಣವಾಗಿ ಪ್ರಸಿದ್ಧಿ ಪಡೆಯುತ್ತಿದೆ. ವಾರಾಂತ್ಯದ ದಿನಗಳಲ್ಲಿ 800ಕ್ಕೂ ಅಧಿಕ ವಾಹನಗಳು, ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಸಫಲವಾಗಿದೆ. ಆ ಮೂಲಕ ಸೋಮವಾರಪೇಟೆ, ಆಲೇಕಟ್ಟೆ ರಸ್ತೆ, ಶಾಂತಳ್ಳಿ, ಹಂಚಿನಳ್ಳಿ, ಮಲ್ಲಳ್ಳಿಯ ಜನರ ವ್ಯಾಪಾರ ವಹಿವಾಟುಗಳೂ ಅಲ್ಪ ಮುನ್ನಡೆ ಕಾಣುತ್ತಿವೆ.
ಇಷ್ಟೆಲ್ಲಾ ಅನುಕೂಲಗಳು ಕಲ್ಪಿತವಾಗಿದ್ದರೂ ಸಹ ಹಂಚಿನಳ್ಳಿಯಿಂದ ಮಲ್ಲಳ್ಳಿ ಜಲಪಾತಕ್ಕೆ ತೆರಳುವ ರಸ್ತೆ ಅವಘಡಗಳ ಕೇಂದ್ರವಾಗುತ್ತಿದೆ. ಕಾಂಕ್ರೀಟ್ ರಸ್ತೆಯಲ್ಲಿ ತೆರಳುವ ವಾಹನಗಳು ಸುಗಮವಾಗಿ ಸಾಗಲು ಅನಾನುಕೂಲವಾಗಿದೆ. ಮಾರ್ಗಮಧ್ಯೆ ಮೂರು ಕಡೆಗಳಲ್ಲಿ ಪ್ರಪಾತವಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಸಂಬಂಧಿಸಿದ ಇಲಾಖೆ ವಿಫಲವಾಗಿದೆ.
ಜಲಪಾತಕ್ಕೆ ತೆರಳುವ ರಸ್ತೆಯಲ್ಲಿ ಪ್ರಪಾತವಿದ್ದು, ವಾಹನಗಳು ತಿರುಗುವ ಸಂದರ್ಭ, ಎದುರಿನ ವಾಹನಕ್ಕೆ ಸ್ಥಳಾವಕಾಶ ಕಲ್ಪಿಸುವ ಸಂದರ್ಭ ಮೃತ್ಯುಕೂಪಕ್ಕೆ ತಳ್ಳಲ್ಪಡುತ್ತಿವೆ. ಕಳೆದ ವಾರವಷ್ಟೇ ಬೆಂಗಳೂರಿನಿಂದ ಆಗಮಿಸಿದ್ದ ಪ್ರವಾಸಿಗರ ವಾಹನವೊಂದು ಸುಮಾರು 140 ಅಡಿಗೂ ಹೆಚ್ಚಿನ ಇಳಿಜಾರು ಪ್ರದೇಶದ ಪ್ರಪಾತಕ್ಕೆ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಯಾವದೇ ಪ್ರಾಣಹಾನಿ ಸಂಭವಿಸದಿದ್ದರೂ ವಾಹನ ಮಾತ್ರ ನಜ್ಜುಗುಜ್ಜಾಗಿದೆ. ಕೆಳಬಿದ್ದ ವಾಹನವನ್ನು ಮೇಲೆತ್ತಲು ಮೂರು ದಿನಗಳ ಕಾಲ ಸತತ ಪ್ರಯತ್ನ ನಡೆಸಲಾಗಿದೆ.
ಇಷ್ಟೇ ಅಲ್ಲ, ಈ ರಸ್ತೆಯಲ್ಲಿ ವಾರಕ್ಕೊಮ್ಮೆಯಾದರೂ ವಾಹನಗಳ ಅವಘಡ ಸಂಭವಿಸುತ್ತಲೇ ಇವೆ. ಇಂತಹ ಪ್ರಪಾತಗಳಿರುವ ಸ್ಥಳಗಳಲ್ಲಿ ‘ಮೆಟಲ್ ಬೀಮ್ ಕ್ರ್ಯಾಷ್ ಬ್ಯಾರಿಯರ್’ ಅಳವಡಿಸಿದರೆ ಹಲವಷ್ಟು ಅವಘಡಗಳು ತಪ್ಪಲಿವೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಮತ್ತು ಲೋಕೋಪಯೋಗಿ ಇಲಾಖಾಧಿಕಾರಿಗಳು ತುರ್ತು ಗಮನ ಹರಿಸಬೇಕಾಗಿದೆ. ಆ ಮೂಲಕ ಪ್ರವಾಸಿಗರ ಪ್ರಾಣಕ್ಕೆ ಬೆಲೆ ನೀಡಬೇಕಿದೆ.
- ವಿಜಯ್ ಹಾನಗಲ್