ಮಡಿಕೇರಿ, ಜ. 24: ಪತ್ನಿಯ ಶೀಲ ಶಂಕಿಸಿ ಹತ್ಯೆ ಮಾಡಿದ ಪತಿಯೋರ್ವನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮೂರ್ನಾಡು ಎಂ. ಬಾಡಗ ಗ್ರಾಮದ ಸಂಜನ್ ಎಂಬವರ ತೋಟದ ಲೈನ್‍ಮನೆಯಲ್ಲಿ ವಾಸವಿದ್ದ ಅಸ್ಸಾಂ ಮೂಲದ ಕೂಲಿ ಕಾರ್ಮಿಕ ಜಂತರುಲ್ಲಾ ಇಸ್ಲಾಂ ಅಜಹರ್ ತಾ. 29.12.2016 ರಂದು ತನ್ನ ಪತ್ನಿ ಜಹರೆನ್ನೆಸಾ ಎಂಬಾಕೆಯ ಶೀಲ ಶಂಕಿಸಿ ಆಕೆಯೊಂದಿಗೆ ಜಗಳವಾಗಿ ಕತ್ತಿಯಿಂದ ಕಡಿದು ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ 1ನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಡಿ. ಪವನೇಶ್ ಅವರು ಆರೋಪಿ ಮೇಲೆ ಆರೋಪ ಸಾಬೀತಾದ ಹಿನ್ನೆಲೆ ಆರೋಪಿ ಜಹರುಲ್ಲ ಇಸ್ಲಾಂ ಅಜಹರ್‍ಗೆ ಕೊಲೆ ಮಾಡಿದ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಹಾಗೂ ರೂ. 5 ಸಾವಿರ ದಂಡ, ಆತ್ಮಹತ್ಯೆಗೆ ಯತ್ನಿಸಿದ ಅಪರಾಧಕ್ಕೆ 1 ವರ್ಷ ಸಾದಾ ಸಜೆ, ರೂ. 2 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸರಕಾರದ ಪರ ಸರಕಾರಿ ಅಭಿಯೋಜಕಿ ಎಂ. ಕೃಷ್ಣವೇಣಿ ವಾದಿಸಿದರು.