ಗೋಣಿಕೊಪ್ಪ ವರದಿ, ಜ. 25: ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪೊನ್ನಂಪೇಟೆಯಲ್ಲಿ ಕಟ್ಟಿಸಿರುವ ಬಾಲಕಿಯರ ಶಾಲಾ ಕಟ್ಟಡ ಶತಮಾನೋತ್ಸವದ ಸಂಭ್ರಮದಲ್ಲಿದೆ. ಜಿಲ್ಲೆಯ ಎರಡನೇ ಬಾಲಕಿಯರ ಶಾಲೆ ಎಂಬ ಹೆಗ್ಗಳಿಕೆಯಲ್ಲಿರುವ ಈ ಶಾಲೆಯ ಶತಮಾನೋತ್ಸವ ತಾ. 27 ರಂದು ನಡೆಯಲಿದೆ.
ಶತಮಾನೋತ್ಸವನ್ನು ಪೊನ್ನಂಪೇಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ, ಭೋದಕವೃಂದ ಮತ್ತು ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಚರಿಸಲಾಗುತ್ತಿದೆ.
ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿ ಪಾರಂಪರಿಕ ಶಿಲಾ ಫಲಕವನ್ನು ಮತ್ತು ಕಟ್ಟಡವನ್ನು ನಿರ್ಮಿಸಿದ ದಾನಿ ಸುಂದರ್ ಸಿಂಗ್ ಅವರ ಭಾವಚಿತ್ರವನ್ನು ಶಾಲಾ ಕೊಠಡಿ ಗೋಡೆಯಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಶಾಲೆಯ ಆವರಣದಲ್ಲಿರುವ 21 ಸೆಂಟು ಜಾಗವನ್ನು ಶಿಕ್ಷಣ ಇಲಾಖೆ ಮೂಲಕ ಅಭಿವೃದ್ಧಿ ಪಡಿಸಲು ಚಿಂತಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಕಟ್ಟಡವನ್ನು ಪಾರಂಪರಿಕ ಕಟ್ಟಡವನ್ನಾಗಿ ಸ್ಥಾಪಿಸಲು ಅನುದಾನದ ಕೊರತೆಯಿಂದ ವಿದ್ಯಾರ್ಥಿಗಳಿಂದ ಮತ್ತು ಸಾರ್ವಜನಿಕರಿಂದ ದೇಣಿಗೆಯನ್ನು ಸಂಗ್ರಹಿಸಲು ಕಟ್ಟಡದ ಸಮಿತಿ ತೀರ್ಮಾನ ಕೈಗೊಂಡಿದೆ.